ನ್ಯಾಯಾಧೀಶರಿಗೆ ಅಸೌಖ್ಯದಿಂದಾಗಿ ಹಿಜಾಬ್ ಪ್ರಕರಣ ವಿಚಾರಣೆಗೆ ವಿಳಂಬ: ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ

Update: 2022-08-02 08:58 GMT

ಹೊಸದಿಲ್ಲಿ: ಹಿಜಾಬ್ ವಿವಾದ ಕುರಿತಾದ ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿಲ್ಲದೇ ಇರುವುದಕ್ಕೆ ಕಾರಣ ನೀಡಿದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ, ನ್ಯಾಯಾಧೀಶರಲ್ಲೊಬ್ಬರಿಗೆ ಅಸೌಖ್ಯವಿದೆ ಎಂದಿದ್ದಾರೆ. ಈ ಪ್ರಕರಣ ವಿಚಾರಣೆಗೆ ಪೀಠ ಸ್ಥಾಪಿಸುವ ಕುರಿತೂ ಅವರು ಹೇಳಿದ್ದಾರೆ.

ಪ್ರಕರಣದ ತುರ್ತು ವಿಚಾರಣೆ ನಡೆಸಲು ದಿನಾಂಕ ನಿಗದಿಪಡಿಸುವಂತೆ  ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಇಂದು ನ್ಯಾಯಾಲಯವನ್ನು ಕೇಳಿಕೊಂಡಾಗ ಜಸ್ಟಿಸ್ ರಮಣ ಮೇಲಿನಂತೆ ಹೇಳಿದ್ದಾರೆ.

"ಅರ್ಜಿಗಳನ್ನು ಬಹಳ ಹಿಂದೆ, ಮಾರ್ಚ್ ತಿಂಗಳಿನಲ್ಲಿ ಸಲ್ಲಿಸಲಾಗಿದೆ, ಕನಿಷ್ಠ ವಿಚಾರಣೆಯ ದಿನಾಂಕವನ್ನಾದರೂ ನಿಗದಿಪಡಿಸಬಹುದು" ಎಂದು ವಕೀಲೆ ಮೀನಾಕ್ಷಿ ಕೋರಿದರು.

"ನ್ಯಾಯಾಧೀಶರು ಸೌಖ್ಯದಿಂದ್ದರೆ ಪ್ರಕರಣ ವಿಚಾರಣೆಯಾಗುತ್ತಿತ್ತು" ಎಂದು ಜಸ್ಟಿಸ್ ರಮಣ ಹೇಳಿದರು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಸರಕಾರ ಹೊರಡಿಸಿದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು.

ಎರಡು ವಾರಗಳ ಹಿಂದೆ, ಜುಲೈ 13ರಂದು  ವಕೀಲ ಪ್ರಶಾಂತ್ ಭೂಷಣ್ ಕೂಡ ಈ ಪ್ರಕರಣದ ತುರ್ತು ವಿಚಾರಣೆ ಕೋರಿದ್ದರಲ್ಲದೆ  ಪ್ರಕರಣ ಇತ್ಯರ್ಥವಾಗದೆ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ ಎಂದು ಹೇಳಿದ್ದರು. ಆಗ ಮುಂದಿನ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಜಸ್ಟಿಸ್ ರಮಣ ಹೇಳಿದ್ದರು.

ಇದಕ್ಕೂ ಮುನ್ನ ಮಾರ್ಚ್ ತಿಂಗಳಿನಲ್ಲಿ ಈ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ದೇವದತ್ತ್ ಕಾಮತ್ ಅವರು ಮಾಡಿದ್ದ ಅಪೀಲನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ, ಹಿಜಾಬ್ ವಿಚಾರಕ್ಕೂ ಪರೀಕ್ಷೆಗಳಿಗೂ ಸಂಬಂಧವಿಲ್ಲವೆಂದಿದ್ದರು. ನಂತರ ಎಪ್ರಿಲ್ 26ರಂದು ವಕೀಲೆ ಮೀನಾಕ್ಷಿ ಅರೋರಾ ಕೂಡ ತುರ್ತು ವಿಚಾರಣೆಗೆ ಕೋರಿದಾಗ ಎರಡು ಮೂರು ದಿನಗಳಲ್ಲಿ ನಿಗದಿಪಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News