×
Ad

ಗುಜರಾತ್; ಇಂಗ್ಲೀಷ್ ಭಾಷೆ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದವರಿಗೆ ಇಂಗ್ಲೀಷ್ ಮಾತಾಡಲು ಬರಲ್ಲ !

Update: 2022-08-02 15:36 IST

ಅಹ್ಮಧಾಬಾದ್: ಕೆನಡಾ ಕಾಲೇಜುಗಳಲ್ಲಿ ದಾಖಲಾತಿ ಪಡೆದು ನಂತರ ಅಲ್ಲಿಂದ ಅಮೆರಿಕಾಗೆ ಅಕ್ರಮವಾಗಿ ವಲಸೆಗೈಯ್ಯುವಂತೆ ಮಾಡಲು ಅಧಿಕ ಇಂಟರ್‍ನ್ಯಾಷನಲ್ ಇಂಗ್ಲಿಷ್ ಲಾಂಗ್ವೇಜ್ ಟೆಸ್ಟಿಂಗ್ ಸಿಸ್ಟಂ (ಐಇಎಲ್‍ಟಿಎಸ್) ಸ್ಕೋರ್ ಪಡೆಯಲು ಅನರ್ಹ ವಿದ್ಯಾರ್ಥಿಗಳಿಗೆ ಸಹಕರಿಸುವ ಜಾಲವೊಂದನ್ನು ಬೇಧಿಸಲು ಗುಜರಾತ್‍ನ ಮೆಹ್ಸಾನ ಜಿಲ್ಲೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಮೆರಿಕಾದ ಕಾನೂನು ಪ್ರಾಧಿಕಾರಗಳ ಮನವಿಯಂತೆ ಈ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಪರೀಕ್ಷೆ ನಡೆಸಿದ ಏಜನ್ಸಿ ಪಾರದರ್ಶಕತೆಯನ್ನು ಕಾಪಾಡಿಲ್ಲ ಹಾಗೂ ಕಳೆದ ಸೆಪ್ಟೆಂಬರ್‍ನಲ್ಲಿ ಪರೀಕ್ಷೆ ನಡೆದ ಕೊಠಡಿಯ ಸೀಸಿಟಿವಿ ಆಫ್ ಮಾಡಲಾಗಿತ್ತು ಎಂದು ಇಲ್ಲಿಯ ತನಕದ ತನಿಖೆಯಲ್ಲಿ ತಿಳಿದು ಬಂದಿದೆ. ಮೆಹ್ಸಾನ ಪೊಲೀಸರ ವಿಶೇಷ ಕಾರ್ಯಾಚರಣೆಗಳ ಪಡೆಯ ಇನ್‍ಸ್ಪೆಕ್ಟರ್ ಭವೇಶ್ ರಾಥೋಡ್ ಈ ತನಿಖೆಯ ನೇತೃತ್ವ ವಹಿಸಿದ್ದಾರೆ.

ಕೆನಡಾದಿಂದ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಲು ವಿಫಲ ಯತ್ನ ನಡೆಸಿದ್ದ ಗುಜರಾತ್‍ನ ಆರು ಯುವಕರನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಅಮೆರಿಕಾದ ಗಡಿ ಪ್ರದೇಶದ ಅಧಿಕಾರಿಗಳು ಬಂಧಿಸಿದ್ದರು. ಈ ಆರು ಮಂದಿ 19-21 ವಯೋವರ್ಗದವರಾಗಿದ್ದು ಅಮೆರಿಕಾದ ಅಕ್ವೆಸಸ್ನೆ ಎಂಬಲ್ಲಿನ ಸೈಂಟ್ ರೆಗಿಸ್ ನದಿಯಲ್ಲಿ ಮುಳುಗುತ್ತಿರುವ ದೋಣಿಯೊಂದರಿಂದ ಅವರನ್ನು ಬಂಧಿಸಲಾಗಿತ್ತು. ಅವರಲ್ಲಿ ನಾಲ್ಕು ಮಂದಿ ಮೆಹ್ಸಾನ ಮತ್ತು ಇನ್ನಿಬ್ಬರು ಗಾಂಧಿನಗರ ಮತ್ತು ಪಠಾನ್‍ನವರಾಗಿದ್ದಾರೆ. ಅವರನ್ನು ಅಮೆರಿಕಾದ ನ್ಯಾಯಾಲಯದೆದುರು ಹಾಜರುಪಡಿಸಿದಾಗ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಇಂಗ್ಲಿಷಿನಲ್ಲಿ ಉತ್ತರಿಸಲು ಅವರು ವಿಫಲರಾಗಿದ್ದರು. ಕೊನೆಗೆ ನ್ಯಾಯಾಲಯವು ಹಿಂದಿ ಅನುವಾದಕರೊಬ್ಬರ ಸಹಾಯ ಪಡೆಯಬೇಕಾಯಿತು. ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆ ಐಇಎಲ್‍ಟಿಎಸ್‍ನಲ್ಲಿ ಅವರಿಗೆ 6.5 ರಿಂದ 7 ಅಂಕಗಳು ದೊರಕಿದೆಯೆಂದು ತಿಳಿದು ನ್ಯಾಯಾಲಯಕ್ಕೆ ಅಚ್ಚರಿಯಾಗಿತ್ತು ಎಂದು ರಾಥೋಡ್ ಹೇಳಿದ್ದಾರೆ.

ಮುಂಬೈಯಲ್ಲಿರುವ ಅಮೆರಿಕಾದ ಕಾನ್ಸುಲೇಟ್ ಜನರಲ್‍ನ ಕ್ರಿಮಿನಲ್ ವಂಚನೆ ತನಿಖಾ ಘಟಕವು ಈ ಕುರಿತು ತನಿಖೆಗೆ ಮೆಹ್ಸಾನ ಪೊಲೀಸರಿಗೆ ಕೋರಿತ್ತು.

ಐಎಎಲ್‍ಟಿಎಸ್ ಪರೀಕ್ಷೆಯು ವಿದ್ಯಾರ್ಥಿಗಳ ಇಂಗ್ಲಿಷ್ ಪ್ರಾವೀಣ್ಯತೆಯನ್ನು ಒರೆಗೆ ಹಚ್ಚುತ್ತದೆ ಹಾಗೂ ಹಲವು ದೇಶಗಳ ಶಿಕ್ಷಣ ಸಂಸ್ಥೆಗಳಿಗೆ ದಾಖಲಾತಿ ಪಡೆಯಲು ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕಿದೆ, ಪ್ರತಿಭಾನ್ವಿತ ವಿದ್ಯಾರ್ಥಿಗಳೂ ಕಠಿಣ ಶ್ರಮದ ನಂತರ 5ರಿಂದ 6 ಅಂಕಗಳನ್ನು ಪಡೆಯಬಹುದಾಗಿದೆ ಆದರೆ ಈ ವಿದ್ಯಾರ್ಥಿಗಳಿಗೆ 6.5 ರಿಂದ 7 ಅಂಕಗಳು ದೊರಕಿದ್ದರೂ ಅವರಿಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ ಎಂದು ರಾಥೋಡ್ ಹೇಳಿದ್ದಾರೆ.

ಈ ವಿದ್ಯಾರ್ಥಿಗಳ ಪೈಕಿ ನಾಲ್ಕ ಮಂದಿ ಗುಜರಾತ್‍ನ ನವಸಾರಿ ಪಟ್ಟಣದಲ್ಲಿ ಸೆಪ್ಟೆಂಬರ್ 25, 2021 ರಂದು ಪರೀಕ್ಷೆಗೆ ಹಾಜರಾಗಿ ಈ ವರ್ಷದ ಮಾರ್ಚ್ 19ರಲ್ಲಿ ಸ್ಟೂಡೆಂಟ್ ವೀಸಾ ಪಡೆದು ಕೆನಡಾಕ್ಕೆ ತೆರಳಿದ್ದರು. ಇದಾದ ಎರಡೇ ವಾರಗಳಲ್ಲಿ ಅವರು ಅಮೆರಿಕಾ-ಕೆನಡಾ ಗಡಿಯಲ್ಲಿ ಬಂಧಿಸಲಾಗಿತ್ತು.

ಪರೀಕ್ಷೆ ನಡೆಸಿದ್ದ ಏಜನ್ಸಿ ಅಹ್ಮದಾಬಾದ್‍ನ ಸಾಬರಮತಿ ಪ್ರದೇಶದಲ್ಲಿ ಕಚೇರಿ ಹೊಂದಿದ್ದು ಸಂಬಂಧಿತ ದಾಖಲೆಗಳೊಂದಿಗೆ ಅಲ್ಲಿನ ಅಧಿಕಾರಿಗಳಿಗೆ ಮೆಹ್ಸಾನ ಪೊಲೀಸ್ ಅಧಿಕಾರಿಗಳ ಮುಂದೆ 48 ಗಂಟೆಗಳೊಳಗೆ ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News