ಹಲವು ಬೇಡಿಕೆಗಳನ್ನು ಮುಂದಿಟ್ಟು ಜಂತರ್‌ಮಂತರ್ ನಲ್ಲಿ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಪ್ರತಿಭಟನೆ

Update: 2022-08-02 12:37 GMT
Photo: All India Fair Price Shop Dealers’ Federation/Facebook

ಹೊಸದಿಲ್ಲಿ: ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಡೀಲರ್ಸ್ ಫೆಡರೇಶನ್‌ನ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಮಂಗಳವಾರ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಪ್ರಹ್ಲಾದ್ ಮೋದಿ ಅವರು ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಡೀಲರ್ಸ್ ಫೆಡರೇಶನ್‌ನ   ಉಪಾಧ್ಯಕ್ಷರಾಗಿದ್ದಾರೆ.

ಅಕ್ಕಿ, ಗೋಧಿ ಮತ್ತು ಸಕ್ಕರೆಯ ಮೇಲಿನ ನಷ್ಟಕ್ಕೆ ಪರಿಹಾರ ಮತ್ತು ನ್ಯಾಯಬೆಲೆ ಅಂಗಡಿಗಳ ಮೂಲಕ ಖಾದ್ಯ ತೈಲ ಮತ್ತು ಬೇಳೆಕಾಳುಗಳನ್ನು ಪೂರೈಸಲು ಅನುಮತಿ ಮೊದಲಾದ ಬೇಡಿಕೆಗಳನ್ನು ಸಂಘಟನೆ ಮುಂದಿಟ್ಟಿದೆ. ಜಂತರ್ ಮಂತರ್ ಬಳಿ ಸಂಘಟನೆಯ ಸದಸ್ಯರು ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಸ್ವಾಂಭರ್ ಬಸು ಮಾತನಾಡಿ, ತಮ್ಮ ಒಂಬತ್ತು ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

"ನಾವು ಬುಧವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಲು ಯೋಜಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟವು ಸರ್ಕಾರವು ದೇಶಾದ್ಯಂತ ಸರಕುಗಳ ಉಚಿತ ವಿತರಣೆಯ "ಪಶ್ಚಿಮ ಬಂಗಾಳ ಪಡಿತರ ಮಾದರಿಯನ್ನು" ಜಾರಿಗೆ ತರಲು ಬಯಸುತ್ತದೆ. ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಬಾಕಿ ಇರುವ ಎಲ್ಲಾ ಮಾರ್ಜಿನ್‌ಗಳನ್ನು ಮರುಪಾವತಿ ಮಾಡಬೇಕು ಎಂದು ಅದು ಒತ್ತಾಯಿಸಿದೆ.

ಖಾದ್ಯ ತೈಲ, ಬೇಳೆಕಾಳುಗಳು ಮತ್ತು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಬಸು ಹೇಳಿದರು. ''ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿ ವಿತರಕರು ಅಕ್ಕಿ ಮತ್ತು ಗೋಧಿಯ ನೇರ ಖರೀದಿ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News