ಕೋವಿಡ್‌ ವ್ಯಾಕ್ಸಿನ್‌ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಿಎಎ ಜಾರಿ: ಅಮಿತ್‌ ಶಾ

Update: 2022-08-02 15:54 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯ ಪೂರ್ಣಗೊಂಡ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬರಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೆಂಧು ಅಧಿಕಾರಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹೇಳಿದ್ದಾರೆ. ಅಮಿತ್ ಶಾ ಅವರ ಈ ನಿಲುವಿನ ಬಗ್ಗೆ ಸ್ವತಃ ಸುವೆಂಧು ಅಧಿಕಾರಿಯೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸಭೆಯ ನಂತರ ಅಧಿಕಾರಿ, ಸಿಎಎಯನ್ನು ಜಾರಿಗೆ ತರಲು ಅಗತ್ಯ ನಿಯಮಗಳನ್ನು ರೂಪಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದರು, ನಂತರ ಅಮಿತ್ ಶಾ ಅವರು ದೇಶಾದ್ಯಂತ ಕೋವಿಡ್ ಲಸಿಕೆಯ ಮೂರನೇ ಡೋಸ್ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರವು ತಕ್ಷಣವೇ ಸಿಎಎ ಜಾರಿಗೊಳಿಸುತ್ತದೆ ಎಂದು ಹೇಳಿದರು. ಭಾರತ ಸರ್ಕಾರವು ಏಪ್ರಿಲ್ 2022 ರಲ್ಲಿ ಕೋವಿಡ್ ಲಸಿಕೆಯ ಮೂರನೇ ಅಥವಾ ಬೂಸ್ಟರ್ ಡೋಸ್ ಅನ್ನು ಪರಿಚಯಿಸುವ ಅಭಿಯಾನವನ್ನು ಪ್ರಾರಂಭಿಸಿದ್ದ, 9 ತಿಂಗಳಲ್ಲಿ ಈ ಅಭಿಯಾನ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಸುವೆಂಧು ಅಧಿಕಾರಿಯ ಪ್ರಕಾರ, ವಿರೋಧ ಪಕ್ಷಗಳ ಭಾರೀ ಪ್ರತಿಭಟನೆಯ ಹೊರತಾಗಿಯೂ ಸರ್ಕಾರವು ಸಿಎಎ ಅನುಷ್ಠಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಗೃಹ ಸಚಿವರು ಅವರಿಗೆ ತಿಳಿಸಿದರು. ಧಾರ್ಮಿಕ ಕಿರುಕುಳದಿಂದಾಗಿ ತಮ್ಮ ದೇಶವನ್ನು ತೊರೆಯಲು ಒತ್ತಾಯಿಸಲ್ಪಟ್ಟ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದ ನಿರಾಶ್ರಿತರಿಗೆ ಸಿಎಎ ಅಡಿಯಲ್ಲಿ ಭಾರತದ ಪೌರತ್ವವನ್ನು ನೀಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News