ಸಿದ್ದೀಕ್‌ ಕಪ್ಪನ್‌ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ ಅಲಹಾಬಾದ್‌ ಹೈಕೋರ್ಟ್

Update: 2022-08-02 16:41 GMT
‌Photo: Thewire/Youtube screengrab

ಲಕ್ನೋ: ಅಲಹಾಬಾದ್ ಹೈಕೋರ್ಟ್ ಮಂಗಳವಾರ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ.  ಇಂದು ಹೈಕೋರ್ಟ್‌ನ ಲಕ್ನೋ ಪೀಠದ ನ್ಯಾಯಮೂರ್ತಿ ಕೃಷ್ಣ ಪಹಲ್ ಅವರ ಮುಂದೆ ವಾದಗಳು ಮುಕ್ತಾಯಗೊಂಡಿದ್ದು, ಹಿರಿಯ ವಕೀಲ ಐ.ಬಿ. ಸಿಂಗ್, ಇಶಾನ್ ಬಾಘೆಲ್ ಕಪ್ಪನ್ ಪರವಾಗಿ ವಾದ ಮಂಡಿಸಿದರು.

ಪತ್ರಕರ್ತ ಸಿದ್ದೀಕ್‌ ಕಪ್ಪನ್ ಅವರನ್ನು ಅಕ್ಟೋಬರ್ 5, 2020 ರಂದು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ವರದಿ ಮಾಡಲು ಹತ್ರಾಸ್‌ಗೆ ಹೋಗುತ್ತಿದ್ದಾಗ ಅವರನ್ನು ತಡೆದು ನಿಲ್ಲಿಸಿದ್ದ ಯುಪಿ ಪೊಲೀಸರು ಕಪ್ಪನ್‌ ರೊಂದಿಗೆ ಪ್ರಯಾಣಿಸುತ್ತಿದ್ದ ಇತರರನ್ನೂ ವಶಕ್ಕೆ ಪಡೆದುಕೊಂಡಿದ್ದರು.
ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಂತರ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ, ಕ್ರಿಮಿನಲ್ ಪಿತೂರಿ, ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಮತ್ತು ಇತರ ಅಪರಾಧಗಳ ಆರೋಪಗಳನ್ನು ಅವರ ಮೇಲೆ ಹೊರಿಸಿದ್ದರು.

ಜುಲೈ 2021 ರಲ್ಲಿ, ಕಪ್ಪನ್ ಅವರ ಜಾಮೀನು ಅರ್ಜಿಯನ್ನು ಮಥುರಾದ ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿತ್ತು. ಫೆಬ್ರವರಿ 21, 2022 ರಂದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಮತ್ತೊಂದು ಜಾಮೀನು ಅರ್ಜಿಯನ್ನು ಅಂಗೀಕರಿಸಿತ್ತು. ಕಪ್ಪನ್‌ ಪ್ರಕರಣದ ಕುರಿತಂತೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮಧ್ಯಸ್ಥಿಕೆಗೆ ಪತ್ರ ಬರೆದಿದ್ದಾರೆ.

ಕಪ್ಪನ್ ಪರ ವಕಾಲತ್ತು ವಹಿಸಿರುವ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ಪತ್ರಕರ್ತನನ್ನು ಅಮಾನವೀಯ ಸ್ಥಿತಿಯಲ್ಲಿ ಜೈಲಿಗೆ ಹಾಕಲಾಗಿದೆ ಎಂದು ಪದೇ ಪದೇ ಆರೋಪಿಸಿದೆ. ಡಿಸೆಂಬರ್ 2020 ರ ಆರಂಭದಲ್ಲಿ, ಕಪ್ಪನ್ ಅವರನ್ನು "ಮೂರು ಬಾರಿ ಹೊಡೆಯಲಾಯಿತು ಮತ್ತು ಬಂಧನದ ಸಮಯದಲ್ಲಿ ಮಾನಸಿಕ ಹಿಂಸೆಗೆ ಒಳಪಡಿಸಲಾಯಿತು" ಎಂದು ಅದು ಹೇಳಿದೆ.

ಕಪ್ಪನ್ ಅವರನ್ನು ಭೇಟಿ ಮಾಡಲು ಹೋದ ಒಕ್ಕೂಟವನ್ನು ಪ್ರತಿನಿಧಿಸುವ ವಕೀಲರಿಗೂ ಆರಂಭದಲ್ಲಿ ಅನುಮತಿ ನಿರಾಕರಿಸಲಾಯಿತು ಮತ್ತು ಸುಪ್ರೀಂ ಕೋರ್ಟ್ ಆದೇಶದ ನಂತರ ಮಾತ್ರ ಅವಕಾಶ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News