ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌ಗೂ ಬೈಕ್‌ನಲ್ಲಿದ್ದ ಸ್ಫೋಟಕಗಳಿಗೂ ನಂಟು:ವಿಧಿವಿಜ್ಞಾನ ತಜ್ಞರ ಸಾಕ್ಷಿ

Update: 2022-08-03 14:19 GMT

ಮುಂಬೈ,ಆ.3: ಸ್ಫೋಟ ಸಂಭವಿಸಿದ್ದ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದ್ದ ಎಲ್‌ಎಂಎಲ್ ವೆಸ್ಪಾ ಸ್ಕೂಟರ್ ಸೇರಿದಂತೆ ಹಲವಾರು ವಸ್ತುಗಳಲ್ಲಿ ಸ್ಫೋಟಕಗಳ ಕುರುಹುಗಳು ಪತ್ತೆಯಾಗಿದ್ದವು ಎಂದು 2008ರ ಮಾಲೆಗಾಂವ ಸ್ಫೋಟ ಪ್ರಕರಣದಲ್ಲಿ 261ನೇ ಸಾಕ್ಷಿಯಾಗಿರುವ ವಿಧಿವಿಜ್ಞಾನ ತಜ್ಞರು ಬುಧವಾರ ಇಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿದರು. ಈ ಸ್ಕೂಟರ್ ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೆಸರಿನಲ್ಲಿ ನೋಂದಣಿಗೊಂಡಿತ್ತು ಎನ್ನಲಾಗಿದೆ.

2008,ಸೆ.29ರಂದು ನಾಸಿಕ್ ಜಿಲ್ಲೆಯ ಮಾಲೆಗಾಂವ ಪಟ್ಟಣದ ಭಿಕು ಚೌಕ್‌ನ ಮಸೀದಿಯೊಂದರ ಸಮೀಪ ಬೈಕೊಂದಕ್ಕೆ ಕಟ್ಟಲಾಗಿದ್ದ ಬಾಂಬ್ ಸ್ಫೋಟಿಸಿ ಆರು ಜನರು ಸಾವನ್ನಪ್ಪಿದ್ದರು ಮತ್ತು ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಸ್ಫೋಟದ ಸ್ಥಳದಿಂದ ವಶಪಡಿಸಿಕೊಳ್ಳಲಾದ ಸ್ಕೂಟರ್ ಮೇಲೆ ಅಮೋನಿಯಂ ನೈಟ್ರೇಟ್‌ನ ಕುರುಹುಗಳು ಪತ್ತೆಯಾಗಿದ್ದವು ಎಂದು 2008ರಲ್ಲಿ ಸಹಾಯಕ ರಾಸಾಯನಿಕ ವಿಶ್ಲೇಷಕರಾಗಿ ಕೆಲಸ ಮಾಡಿದ್ದ ವಿಧಿವಿಜ್ಞಾನ ತಜ್ಞರು ತಿಳಿಸಿದರು. ಅಮೋನಿಯಂ ನೈಟ್ರೇಟ್‌ನ್ನು ಸ್ಫೋಟಕವನ್ನಾಗಿ ಬಳಸಲಾಗುತ್ತದೆ ಎಂದು ಅವರು ಹೇಳಿದರು.

ಸ್ಫೋಟದ ಸ್ಥಳಕ್ಕೆ ತಾನು ಭೇಟಿ ನೀಡಿದಾಗ ತೀವ್ರವಾಗಿ ಹಾನಿಗೊಂಡಿದ್ದ ಎಲ್‌ಎಂಎಲ್ ವೆಸ್ಪಾ ಸ್ಕೂಟರ್‌ನ್ನು ಅಲ್ಲಿ ನೋಡಿದ್ದೆ. ಸ್ಕೂಟರ್‌ನ ಇಂಧನ ಟ್ಯಾಂಕ್,ಸೀಟ್ ಕವರ್ ಮತ್ತು ಡಿಕ್ಕಿ ಹಾರಿಹೋಗಿದ್ದು, ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿ ಸುತ್ತಲೂ ಹರಡಿಕೊಂಡಿದ್ದವು. ಒಂದು ಹೊಂಡಾ ಯುನಿಕಾರ್ನ್ ಮತ್ತು ಸೈಕಲ್ ಸೇರಿದಂತೆ ಅಲ್ಲಿದ್ದ ಇತರ ವಾಹನಗಳೂ ಭಾಗಶಃ ಹಾನಿಗೀಡಾಗಿದ್ದವು ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು.

 ಪೊಲೀಸರು ಕಳುಹಿಸಿದ್ದ ವಸ್ತುಸಾಕ್ಷಗಳ ರಾಸಾಯನಿಕ ವಿಶ್ಲೇಷಣೆ, ಅದರ ವರದಿಯನ್ನು ಸಲ್ಲಿಸುವುದು ಮತ್ತು ಸ್ಫೋಟ ಸ್ಥಳಕ್ಕೆ ಭೇಟಿ ತನ್ನ ಕೆಲಸದಲ್ಲಿ ಒಳಗೊಂಡಿದ್ದವು ಎಂದು ಈಗ ನಿವೃತ್ತರಾಗಿರುವ ವಿಧಿವಿಜ್ಞಾನ ತಜ್ಞರು ವಿಶೇಷ ಸರಕಾರಿ ಅಭಿಯೋಜಕ ಅವಿನಾಶ ರಸಲ್ ಅವರ ಪಾಟೀಸವಾಲಿಗೆ ಉತ್ತರದಲ್ಲಿ ತಿಳಿಸಿದರು.

ಸ್ಫೋಟದಿಂದಾಗಿ ಸ್ಕೂಟರ್‌ನ ಇಂಜಿನ್ ಸಂಖ್ಯೆ ಗೀಚಲ್ಪಟ್ಟಿತ್ತು ಮತ್ತು ಕಾರ್ಯವಿಧಾನವೊಂದರ ಮೂಲಕ ಮೂರು ಸಂಭವನೀಯ ಸಂಖ್ಯೆಗಳನ್ನು ತಾನು ಗುರುತಿಸಿದ್ದೆ ಎಂದೂ ಅವರು ಹೇಳಿದರು.

ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ದ ಕಚೇರಿಯಲ್ಲಿ ನಿಲ್ಲಿಸಲಾಗಿದ್ದ ಎರಡು ದ್ವಿಚಕ್ರ ವಾಹನಗಳು ಮತ್ತು ಐದು ಸೈಕಲ್‌ಗಳನ್ನು ವಿಚಾರಣೆ ಸಂದರ್ಭ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

ಪಂಚರಾಗಿ ಕಾರ್ಯ ನಿರ್ವಹಿಸಿದ್ದ ಇನ್ನೋರ್ವ ಸಾಕ್ಷಿ 2019ರಲ್ಲಿ ಸ್ಫೋಟ ಸ್ಥಳದಿಂದ ವಶ ಪಡಿಸಿಕೊಳ್ಳಲಾಗಿದ್ದ ಬೈಕ್‌ನ್ನು ಗುರುತಿಸಿದ್ದರು.

ಎಟಿಎಸ್ ಆರಂಭದಲ್ಲಿ ಪ್ರಕರಣದ ತನಿಖೆಯನ್ನು ನಡೆಸಿದ್ದು,ಬಳಿಕ ಅದನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News