ನಾವು ನರೇಂದ್ರ ಮೋದಿಗೆ ಹೆದರುವುದಿಲ್ಲ: ರಾಹುಲ್ ಗಾಂಧಿ

Update: 2022-08-04 13:02 GMT
ರಾಹುಲ್ ಗಾಂಧಿ (File Photo: PTI)

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ರಾಜಧಾನಿಯ ಹೆರಾಲ್ಡ್ ಹೌಸ್‍ನಲ್ಲಿರುವ ಯಂಗ್ ಇಂಡಿಯನ್ ಲಿಮಿಟೆಡ್ ಕಚೇರಿಯನ್ನು ಸೀಲ್ ಮಾಡಿದ ಮರುದಿನ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸರಕಾರ ನಮ್ಮನ್ನು ಬೆದರಿಸಲು ಯತ್ನಿಸುತ್ತಿದೆ. ನಾವು ನರೇಂದ್ರ ಮೋದಿಗೆ ಹೆದರುವುದಿಲ್ಲ,'' ಎಂದು ಹೇಳಿದರು.

"ರಾಷ್ಟ್ರವನ್ನು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಮತ್ತು ಸಾಮರಸ್ಯ ಕಾಪಾಡುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡುವುದನ್ನು ಮುಂದುವರಿಸುತ್ತೇನೆ,'' ಎಂದು ರಾಹುಲ್ ಹೇಳಿದರು.

ಯಂಗ್ ಇಂಡಿಯನ್ ಕಚೇರಿ ಸೀಲ್ ಮಾಡಿರುವುದು ಹಾಗೂ ಎಐಸಿಸಿ ಮುಖ್ಯ ಕಾರ್ಯಾಲಯದ ಹೊರಗೆ ಪೊಲೀಸರ ನಿಯೋಜನೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಮೋದಿ ಸರಕಾರದ ವಿರುದ್ಧ ಕಿಡಿ ಕಾರಿದೆ. ಶುಕ್ರವಾರ ಕಾಂಗ್ರೆಸ್ ಪಕ್ಷವು ಬೆಲೆಯೇರಿಕೆ, ನಿರುದ್ಯೋಗ ಮತ್ತು ಜಿಎಸ್‍ಟಿ ಏರಿಕೆಯ ವಿರುದ್ಧ ನಡೆಸಲುದ್ದೇಶಿಸಿರುವ ಪ್ರತಿಬಟನೆಯ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಪಕ್ಷ ಆರೋಪಿಸಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಿವಾಸಗಳನ್ನೂ ಪೊಲೀಸರು ಸುತ್ತುವರಿದಿದ್ದಾರೆಂದು ಕಾಂಗ್ರೆಸ್ ಹೇಳಿಕೊಂಡಿದೆ.

ಯಂಗ್ ಇಂಡಿಯನ್ ಒಂದು ಲಾಭರಹಿತ ಸಂಸ್ಥೆ ಹಾಗೂ ಅಕ್ರಮ ಹಣ ವರ್ಗಾವಣೆಯ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಹೇಳುತ್ತಿದ್ದರೂ ಜಾರಿ ನಿರ್ದೇಶನಾಲಯ ಇದನ್ನು ನಿರಾಕರಿಸಿದೆ. ಸಂಸ್ಥೆಯು 2010ರಿಂದ ಯಾವುದೇ ಚ್ಯಾರಿಟೇಬಲ್ ಕೆಲಸ ಮಾಡಿಲ್ಲ ಹಾಗೂ ರೂ. 800 ಕೋಟಿಗೂ ಅಧಿಕ ಮೌಲ್ಯದ ಎಜೆಎಲ್ ಆಸ್ತಿಯನ್ನು ಅದು ತನ್ನ ವಶಕ್ಕೆ ಪಡೆದು ಬಾಡಿಗೆ ಪಡೆಯುತ್ತಿದೆ ಎಂದು ಅದು ಹೇಳುತ್ತಿದೆ.

ಎಜೆಎಲ್ ಮತ್ತು ಯಂಗ್ ಇಂಡಿಯನ್ ಎರಡೂ ನೋಂದಣಿಯಾಗಿರುವ ಕಂಪೆನಿಗಳಾಗಿದ್ದು ಅವುಗಳ ವಹಿವಾಟು ವಿವರಗಳು ಸಾರ್ವಜನಿಕವಾಗಿ ಲಭ್ಯವಿದೆ ಎಂದು ಕಾಂಗ್ರೆಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News