ಎನ್ಎಸ್ಇ ಫೋನ್ ಕದ್ದಾಲಿಕೆ ಪ್ರಕರಣ: ಮಾಜಿ ಮುಂಬೈ ಪೊಲೀಸ್ ಆಯುಕ್ತ ಸಂಜಯ ಪಾಂಡೆಗೆ ಜಾಮೀನು ನಿರಾಕರಣೆ

Update: 2022-08-04 17:26 GMT

ಹೊಸದಿಲ್ಲಿ,ಆ.4: ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ದ ಉದ್ಯೋಗಿಗಳ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಮುಂಬೈ ಆಯುಕ್ತ ಸಂಜಯ ಪಾಂಡೆಯವರಿಗೆ ಜಾಮೀನು ನೀಡಲು ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಗುರುವಾರ ನಿರಾಕರಿಸಿದೆ.

ಜಾರಿ ನಿರ್ದೇಶನಾಲಯ (ಈ.ಡಿ.)ವು ಜು.19ರಂದು ಪಾಂಡೆಯವರನ್ನು ಬಂಧಿಸಿದ್ದು,ಆ.16ರವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಶೇಷ ನ್ಯಾಯಾಧೀಶೆ ಸುನೇನಾ ಶರ್ಮಾ ಅವರು ಬುಧವಾರ ಪಾಂಡೆ ಜಾಮೀನು ಅರ್ಜಿಯ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದ್ದರು. ಎನ್‌ಎಸ್‌ಇಯಲ್ಲಿಯ ಶಂಕಾಸ್ಪದ ಚಟುವಟಿಕೆಗಳ ಬಗ್ಗೆ ಮೊದಲು ಸುಳಿವು ನೀಡಿದ್ದೇ ತಾನು ಎಂದು ಪಾಂಡೆ ವಾದಿಸಿದ್ದರು.

 ಪಾಂಡೆ ಪರ ವಕೀಲ ತನ್ವೀರ್ ಅಹ್ಮದ್ ಮೀರ್ ಅವರು,ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ಸೂಚಿಸುವ ಫೋನ್ ಕರೆಗಳ ಮೇಲೆ ನಿಗಾಯಿರಿಸುವ ಕಾರ್ಯವನ್ನು ತನ್ನ ಕಕ್ಷಿದಾರರಿಗೆ ವಹಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ‘ಎನ್‌ಎಸ್‌ಇ ಉದ್ಯೋಗಿಗಳು ಐಪಿಎಲ್‌ನಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು ಮತ್ತು ನಾನು ಆ ಚಟುವಟಿಕೆಗಳನ್ನು ವರದಿ ಮಾಡಿದ್ದೆ. ನಾನು ಏನು ತಪ್ಪು ಮಾಡಿದ್ದೇನೆ ’ ಎಂದು ಪಾಂಡೆ ನ್ಯಾಯಾಲಯವನ್ನು ಪ್ರಶ್ನಿಸಿದ್ದರು. ಈ.ಡಿ.ಎನ್‌ಎಸ್‌ಇ ಮಾಜಿ ಮುಖ್ಯಸ್ಥರಾದ ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ ಅವರೊಂದಿಗೆ ಪಾಂಡೆ ವಿರುದ್ಧ ಜು.14ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.

ಎನ್‌ಎಸ್‌ಇಯಲ್ಲಿ ಕೋ-ಲೊಕೇಷನ್ ಹಗರಣದ ಸಂದರ್ಭದಲ್ಲಿ ಉದ್ಯೋಗಿಗಳ ಫೋನ್ ಕದ್ದಾಲಿಕೆಗೆ ಈ ಪ್ರಕರಣವು ಸಂಬಂಧಿಸಿದೆ. ಪಾಂಡೆ ಐಸೆಕ್ ಸೆಕ್ಯೂರಿಟಿಸ್ ಹೆಸರಿನ ಕಂಪನಿಯನ್ನು ಸ್ಥಾಪಿಸಿದ್ದರು ಮತ್ತು ಎನ್‌ಎಸ್‌ಯ ಉದ್ಯೋಗಿಗಳ ವಿದ್ಯುನ್ಮಾನ ಕಣ್ಗಾವಲಿಗೆ ಈ ಕಂಪನಿಯನ್ನು ಬಳಸಲಾಗಿತ್ತು ಎಂದು ಸಿಬಿಐ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News