ಸ್ವದೇಶಿ ನಿರ್ಮಿತ ಲೆಸರ್ ನಿರ್ದೇಶಿತ ಟ್ಯಾಂಕ್ ನಿರೋಧಕ ಕ್ಷಿಪಣಿ ಯಶಸ್ವಿ ಪ್ರಯೋಗ
ಹೊಸದಿಲ್ಲಿ, ಆ. 4: ದೇಶಿ ನಿರ್ಮಿತ ಲೆಸರ್ ನಿರ್ದೇಶಿತ ಟ್ಯಾಂಕ್ ನಿರೋಧಕ ನಿರ್ದೇಶಿತ ಕ್ಷಿಪಣಿ (ಎಟಿಜಿಎಂ)ಯನ್ನು ಮಹಾರಾಷ್ಟ್ರದ ಅಹ್ಮದ್‌ನಗರ್‌ನ ಕೆ.ಕೆ. ರೇಂಜ್‌ನಲ್ಲಿರುವ ಮುಖ್ಯ ಯುದ್ಧ ಟ್ಯಾಂಕ್ (ಎಂಬಿಟಿ) ಅರ್ಜುನ್‌ನಿಂದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ಸೇನೆ ಗುರುವಾರ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.
ಕ್ಷಿಪಣಿ ನಿಖರವಾಗಿ ಗುರಿಗೆ ಅಪ್ಪಳಿಸಿದೆ ಹಾಗೂ ಎರಡು ವಿಭಿನ್ನ ವಲಯವನ್ನು ಯಶಸ್ವಿಯಾಗಿ ಸೋಲಿಸಿದೆ. ಕ್ಷಿಪಣಿಯ ಹಾರಾಟ ಸಾಮರ್ಥ್ಯವನ್ನು ಟೆಲಿಮೆಟ್ರಿ ವ್ಯವಸ್ಥೆ ದಾಖಲಿಸಿಕೊಂಡಿದೆ.
ಯುದ್ಧ ವಾಹನಗಳನ್ನು ನಾಶಗೊಳಿಸಲು ಸ್ವದೇಶಿ ನಿರ್ಮಿತ ಲೇಸರ್ ನಿರ್ದೇಶಿತ ಎಟಿಜಿಎಂ ತೀವ್ರ ಸ್ಫೋಟಕ ಟ್ಯಾಂಕ್ ವಿರೋಧಿ ಸಿಡಿತಲೆಯನ್ನು ಇದು ಹೊಂದಿರಲಿದೆ. ಬಹು ವೇದಿಕೆಯ ಉಡಾವಣಾ ಸಾಮರ್ಥ್ಯದೊಂದಿಗೆ ಈ ಎಟಿಜಿಎಂ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಎಂಬಿಟಿ ಅರ್ಜುನ್‌ನ 120 ಎಂಎಂ ರೈಫಲ್ ಗನ್‌ನಿಂದ ಪ್ರಯೋಗಕ್ಕೆ ಒಳಗಾಗುವ ಮೂಲಕ ತಾಂತ್ರಿಕ ಮೌಲ್ಯಮಾನಪನಕ್ಕೆ ಒಳಗಾಗುತ್ತಿದೆ.