ವಿಷಪೂರಿತ ಮದ್ಯ ಸೇವನೆ: ಆರು ಮಂದಿ ಸಾವು, ಹಲವರು ಅಸ್ವಸ್ಥ

Update: 2022-08-05 02:03 GMT

ಪಾಟ್ನಾ: ಬಿಹಾರ(Bihar)ದ ಸರನ್ ಜಿಲ್ಲೆಯಲ್ಲಿ ಗುರುವಾರ ವಿಷಪೂರಿತ ಮದ್ಯ(spurious liquor) ಸೇವಿಸಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಒಂಬತ್ತು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೂರು ಮಂದಿ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಒಬ್ಬ ಅಸ್ವಸ್ಥ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಐ.ಎಸ್.ಠಾಕೂರ್ ಹೇಳಿದ್ದಾರೆ. ಛಾಪ್ರ ಸದರ್ ಆಸ್ಪತ್ರೆಗೆ ತರುವ ವೇಳೆಗೆ ಇಬ್ಬರು ಮೃತಪಟ್ಟಿದ್ದರು. ಅಸ್ವಸ್ಥರ ಪೈಕಿ ಬಹಳಷ್ಟು ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಂಗಳವಾರ ನಡೆದ ನಾಗರಪಂಚಮಿ ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿ ಕೆಲವರು ಮದ್ಯ ಸೇವಿಸಿದ್ದರು ಎಂದು ಸರನ್ ಎಸ್ಪಿ ಸಂತೋಷ್ ಕುಮಾರ್ ಹೇಳಿದ್ದಾರೆ. ಮರೌರಾ ಮತ್ತು ಸೋನೇಪುರ ಡಿಎಸ್ಪಿಗಳು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಅವರು ಹೇಳಿದರು.

ಗ್ರಾಮದಲ್ಲಿ ಮದ್ಯ ಸೇವಿಸಿದವರ ನಿಖರ ಸಂಖ್ಯೆಯನ್ನು ಪತ್ತೆ ಮಾಡುವ ಪ್ರಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾವಿನ ಕಾರಣ ತಿಳಿಯಲು ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ತಂಡವನ್ನು ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಸರನ್ ಜಿಲ್ಲಾಧಿಕಾರಿ ರಾಜೇಶ್ ಮೀನಾ ಹೇಳಿದ್ದಾರೆ.

ಇದನ್ನೂ ಓದಿ: ಸುಧೀರ್ ಗೆ ಪ್ಯಾರಾ ಪವರ್‍ಲಿಫ್ಟಿಂಗ್ ಚಿನ್ನ; ಮುರಳಿ ಶ್ರೀಶಂಕರ್ ಗೆ ಲಾಂಗ್‍ಜಂಪ್ ಬೆಳ್ಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News