ನ್ಯಾಯಾಲಯ ಆದೇಶ ಉಲ್ಲಂಘನೆ: ಸೇನೆಯ ಹಿರಿಯ ಅಧಿಕಾರಿಗೆ ಸುಪ್ರೀಂ ತರಾಟೆ

Update: 2022-08-05 04:33 GMT

ಹೊಸದಿಲ್ಲಿ: ಜಮೀನೊಂದನ್ನು ನಾಗರಿಕ ಸ್ವಾಧೀನಕ್ಕೆ ಬಿಟ್ಟುಕೊಡಬೇಕು ಎಂಬ ವಿಚಾರಣಾ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿ, ಸಶಸ್ತ್ರ ಪಡೆಯ ಬಲವನ್ನು ದುರ್ಬಳಕೆ ಮಾಡಿಕೊಂಡು ಭೂಮಿಯ ಆವರಣ ಗೋಡೆಯನ್ನು ನೆಲಸಮ ಮಾಡಿದ ಆರೋಪ ಎದುರಿಸುತ್ತಿರುವ ತೆಲಂಗಾಣ- ಆಂಧ್ರ ಉಪ ಕ್ಷೇತ್ರದ ಜನರಲ್ ಆಫೀಸರ್ ಕಮಾಂಡಿಂಗ್ ಅವರನ್ನು ಗುರುವಾರ ಸುಪ್ರೀಂಕೋರ್ಟ್(Supreme Court) ತರಾಟೆಗೆ ತೆಗೆದುಕೊಂಡಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ಪ್ರಕರಣದ ಕಡತಗಳನ್ನು ಬಿಚ್ಚುವ ಮುನ್ನವೇ, ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಳಿ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠ, "ಸಶಸ್ತ್ರ ಪಡೆಗಳ ಕರ್ತವ್ಯ ದೇಶವನ್ನು ರಕ್ಷಿಸುವುದು. ತನಗೆ ಸಶಸ್ತ್ರ ಪಡೆಗಳ ಬಲ ಇದೆ ಎಂಬ ವ್ಯಕ್ತಿಯೊಬ್ಬರು ದರ್ಪ ತೋರಿಸಬಾರದು" ಎಂದು ಎಚ್ಚರಿಕೆ ನೀಡಿತು.

"ಸೇನೆ ಪ್ರತಿ ನ್ಯಾಯಾಲಯದಲ್ಲಿ ಈ ನಿರ್ದಿಷ್ಟ ಭೂಮಿ ಮೇಲಿನ ಹಕ್ಕು ಪ್ರತಿಪಾದನೆಯಲ್ಲಿ ಸೋತಿದೆ. ಆದರೂ ನಾಗರಿಕರನ್ನು ಚದುರಿಸಲು ಸೇನೆಯನ್ನು ಕಳುಹಿಸಬಹುದು ಎಂದು ನೀವು ಯೋಚಿಸುತ್ತಿದ್ದೀರಿ. ಆ ಅಧಿಕಾರಿಯ ಹೆಸರು ಕೊಡಿ. ಅವರನ್ನು ಜೈಲಿಗೆ ಅಟ್ಟುತ್ತೇವೆ" ಎಂದು ಪೀಠ ಹೇಳಿದೆ.

ಇದನ್ನೂ ಓದಿ: ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ನಿರಾಕರಿಸುತ್ತಿರುವ ವಿದ್ಯಾರ್ಥಿಗಳು!

ನಾಗರಿಕ ಭೂಮಿಯನ್ನು ಇನ್ನೂ ಗುರುತಿಸಿಲ್ಲ ಎಂಬ ವಾದದ ಮೂಲಕ ಸೇನೆಯ ಕ್ರಮವನ್ನು ಸಮರ್ಥಿಸಿಕೊಳ್ಳಲು ರಾಜು ಮುಂದಾದಾಗ, "ಇಂಥ ವಾದದಿಂದ ದಿಕ್ಕು ತಪ್ಪಿಸಲು ನಾವು ಮಕ್ಕಳು ಎಂದು ನೀವು ಅಂದುಕೊಂಡಿದ್ದೀರಾ? ಸಾಮಾನ್ಯ ವ್ಯಕ್ತಿಯೊಬ್ಬರು ಸೇನೆಯ ಬಲದ ವಿರುದ್ಧ ಸವಾಲು ಹಾಕಲು ಸಾಧ್ಯವೇ" ಎಂದು ಖಾರವಾಗಿ ನ್ಯಾಯಾಧೀಶರು ಪ್ರಶ್ನಿಸಿದರು.

ವಿಚಾರಣಾ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಕೇಂದ್ರ ಸಲ್ಲಿಸಿದ ಮನವಿಯನ್ನು ನ್ಯಾಯಪೀಠ ವಜಾ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News