ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿಂದ ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ ವಶಕ್ಕೆ

Update: 2022-08-05 07:38 GMT
Photo: PTI

ಹೊಸದಿಲ್ಲಿ: ಹಣದುಬ್ಬರ,  ನಿರುದ್ಯೋಗ ಸಮಸ್ಯೆ ಹಾಗೂ ಅವಶ್ಯಕ ವಸ್ತುಗಳ ಮೇಲೆ ಜಿಎಸ್ ಟಿ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಇಂದು ರಾಷ್ಟ್ರ ರಾಜಧಾನಿಯಲ್ಲಿ ಬೃಹತ್  ಪ್ರತಿಭಟನೆಯನ್ನು ನಡೆಸಿದೆ. ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾದರು. ಕಾಂಗ್ರೆಸ್  ಅಧಿನಾಯಕಿ ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದರ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯ್ ಚೌಕ್‌ನಿಂದ ರಾಷ್ಟ್ರಪತಿ ಭವನದವರೆಗೆ ನಡೆದ ಕಾಂಗ್ರೆಸ್‌ನ ಪ್ರತಿಭಟನಾ ಮೆರವಣಿಗೆಯನ್ನು ಅರೆಸೇನಾ ಪಡೆಗಳು ಹಾಗೂ ದಿಲ್ಲಿ ಪೊಲೀಸರು ತಡೆದಿದ್ದಾರೆ.

ನಿರುದ್ಯೋಗ, ಹಣದುಬ್ಬರ ಸಹಿತ ಹಲವು ಸಮಸ್ಯೆಯನ್ನು ವಿರೋಧಿಸಿ ರಾಷ್ಟ್ರಪತಿ ಭವನದತ್ತ ಬೃಹತ್ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ವಹಿಸಿದ್ದ ರಾಹುಲ್ ಗಾಂಧಿ ಹಾಗೂ ಶಶಿ ತರೂರ್  ಸಹಿತ ಹಲವಾರು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಲೆ ಏರಿಕೆ ಹಾಗೂ ನಿರುದ್ಯೋಗವನ್ನು ವಿರೋಧಿಸಿ ತೆಲಂಗಾಣ, ಬಿಹಾರ, ಜಮ್ಮು ಸೇರಿದಂತೆ ವಿವಿಧ ರಾಜ್ಯಗಳ ಕಾಂಗ್ರೆಸ್  ನಾಯಕರು, ಕಾರ್ಯಕರ್ತರುಗಳು ಇಂದು ಪ್ರತಿಭಟನೆ ನಡೆಸಿದ್ದಾರೆ.

ಕೆಲವು ಸಂಸದರನ್ನು ಬಂಧಿಸಿ, ಥಳಿಸಿದ್ದಾರೆ: ರಾಹುಲ್ ಗಾಂಧಿ

ಶುಕ್ರವಾರ ರಾಷ್ಟ್ರಪತಿ ಭವನಕ್ಕೆ ಪಾದಯಾತ್ರೆ ನಡೆಸುತ್ತಿದ್ದ ವೇಳೆ ಬಂಧನಕ್ಕೊಳಗಾಗಿದ್ದ ರಾಹುಲ್ ಗಾಂಧಿ, ''ಹಣದುಬ್ಬರ ಹಾಗೂ  ಬೆಲೆ ಏರಿಕೆಯ ವಿಷಯವನ್ನು ಪ್ರಸ್ತಾಪಿಸಲು ಎಲ್ಲಾ ಕಾಂಗ್ರೆಸ್ ಸಂಸದರು ರಾಷ್ಟ್ರಪತಿ ಭವನದತ್ತ ಪಾದಯಾತ್ರೆ ನಡೆಸುತ್ತಿದ್ದರು ಆದರೆ ಅವರು ನಮ್ಮನ್ನು ಇಲ್ಲಿಂದ ಮುಂದೆ ಹೋಗಲು ಬಿಡುತ್ತಿಲ್ಲ, ನಮ್ಮ ಕೆಲಸ. ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವುದು... ಕೆಲವು ಸಂಸದರನ್ನು ಬಂಧಿಸಲಾಗಿದೆ, ಕೆಲವರನ್ನು ಥಳಿಸಲಾಗಿದೆ'' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News