ರಾಹುಲ್ ಗಾಂಧಿ ತಿರುಚಿದ ವೀಡಿಯೋ ಪ್ರಕರಣ: ಝೀ ನ್ಯೂಸ್ ಸಂಪಾದಕರಿಗೆ ಬಂಧನದಿಂದ ರಕ್ಷಣೆಯೊದಗಿಸಿದ ಸುಪ್ರೀಂ
ಹೊಸದಿಲ್ಲಿ,ಆ.5: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ತಿರುಚಲ್ಪಟ್ಟಿದ್ದ ವೀಡಿಯೊಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಝೀ ನ್ಯೂಸ್ನ ಸಂಪಾದಕ ರಜನೀಶ್ ಅಹುಜಾ ಅವರಿಗೆ ಬಂಧನದಿಂದ ರಕ್ಷಣೆಯನ್ನು ನೀಡಿದೆ.
ಮೂಲ ವೀಡಿಯೊದಲ್ಲಿ ರಾಹುಲ್ ಜೂ.24ರಂದು ತನ್ನ ವಯನಾಡ್ ಕಚೇರಿಗೆ ದಾಳಿ ಮಾಡಿದ್ದ ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ)ದ ಕಾರ್ಯಕರ್ತರ ಕುರಿತು ಹೇಳಿಕೆಯನ್ನು ನೀಡಿದ್ದರು. ರಾಹುಲ್ ದಾಳಿಕೋರರನ್ನು ಮಕ್ಕಳು ಎಂದು ಬಣ್ಣಿಸಿದ್ದರು ಮತ್ತು ತನಗೆ ಅವರ ವಿರುದ್ಧ ಯಾವುದೇ ದ್ವೇಷವಿಲ್ಲ ಎಂದು ಹೇಳಿದ್ದರು ಎಂದು ಕಾಂಗ್ರೆಸ್ ತಿಳಿಸಿತ್ತು.
ವೀಡಿಯೊ ತುಣುಕನ್ನು ತಿರುಚಲಾಗಿದೆ ಮತ್ತು ಅದು ರಾಹುಲ್ ಉದಯಪುರದಲ್ಲಿ ಟೈಲರ್ ಹಂತಕರ ಕುರಿತು ಹೇಳಿರುವಂತೆ ಕಾಣಿಸುವಂತೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದರು.
ತಿರುಚಲ್ಪಟ್ಟಿದ್ದ ವೀಡಿಯೋವನ್ನು ಪ್ರಸಾರ ಮಾಡಿದ್ದ ಸುದ್ದಿವಾಹಿನಿಯು ಬಳಿಕ ಅದನ್ನು ಹಿಂದೆಗೆದುಕೊಂಡು ಕ್ಷಮೆಯನ್ನು ಯಾಚಿಸಿತ್ತು.
ಶುಕ್ರವಾರ ನ್ಯಾ.ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಈ ವಿಷಯವನ್ನು ಝೀ ಹಿಂದುಸ್ತಾನ ನಿರೂಪಕ ರೋಹಿತ್ ರಂಜನ್ ಅವರು ದಾಖಲಿಸಿರುವ ಸಂಬಂಧಿತ ಪ್ರಕರಣದೊಂದಿಗೆ ಟ್ಯಾಗ್ ಮಾಡುವಂತೆ ನ್ಯಾಯಾಲಯದ ರಿಜಿಸ್ಟ್ರಿಗೆ ಆದೇಶಿಸಿತು.
ದಾಖಲಾಗಿರುವ ಎಫ್ಐಆರ್ಗಳು ಮತ್ತು ಭವಿಷ್ಯದ ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ಅಹುಜಾ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳುವಂತಿಲ್ಲ ಎಂದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದ ಸರ್ವೋಚ್ಚ ನ್ಯಾಯಾಲಯವು,ಪ್ರಕರಣದ ಕುರಿತು ತಮ್ಮ ನಿಲುವುಗಳನ್ನು ತಿಳಿಸುವಂತೆ ಕೇಂದ್ರ,ರಾಜಸ್ಥಾನ ಮತ್ತು ಛತ್ತೀಸ್ಗಡ ಸರಕಾರಗಳಿಗೆ ನೋಟಿಸ್ಗಳನ್ನು ಹೊರಡಿಸಿತು.
ವೀಡಿಯೊಕ್ಕೆ ಸಂಬಂಧಿಸಿದಂತೆ ಅಹುಜಾ ವಿರುದ್ಧ ರಾಜಸ್ಥಾನ ಮತ್ತು ಛತ್ತೀಸ್ಗಡಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸರ್ವೋಚ್ಚ ನ್ಯಾಯಾಲಯವು ಜು.8ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿತ್ ರಂಜನ್ಗೆ ಬಂಧನದಿಂದ ರಕ್ಷಣೆಯನ್ನು ನೀಡಿತ್ತು.