ಕುಂದಾಪುರ : ಮಹಿಳೆಗೆ ಮಾರಣಾಂತಿಕ ಹಲ್ಲೆ ನಡೆಸಿ, ಚಿನ್ನಾಭರಣ ಸುಲಿಗೆ

Update: 2022-08-05 15:40 GMT

ಕುಂದಾಪುರ, ಆ.5: ಶಾಲಾ ವಾಹನದಲ್ಲಿ ಬರುತ್ತಿರುವ ತನ್ನ ಮಗುವಿಗೆ ರಸ್ತೆ ಬದಿ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಕೊರ್ಗಿ-ಹೆಸ್ಕುತ್ತೂರು ತಿರುವಿನ ಬಳಿ ಶುಕ್ರವಾರ ಸಂಜೆ ನಡೆದಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕೊರ್ಗಿ ಗ್ರಾಪಂ ವ್ಯಾಪ್ತಿಯ ಕಾಡಿನಬೆಟ್ಟು ನಿವಾಸಿ ದೇವಕಿ (32) ಎಂಬವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

ಇವರು ತೆಕ್ಕಟ್ಟೆ- ದಬ್ಬೆಕಟ್ಟೆ ಮುಖ್ಯ ರಸ್ತೆಯ ಸಮೀಪದಲ್ಲಿ ಶಾಲಾ ವಾಹನದಲ್ಲಿ ಬರುವ ತನ್ನ ಮಗುವಿಗಾಗಿ ಕಾಯುತ್ತಿದ್ದರು. ಆಗ ಅಲ್ಲಿಂದ ಬಂದ ವ್ಯಕ್ತಿಯೊಬ್ಬ ಮಹಿಳೆಯ ತಲೆಗೆ ಮಾರಕಾಯುಧದಿಂದ ಹಲ್ಲೆ ನಡೆಸಿದ ಎನ್ನಲಾಗಿದೆ. ಬಳಿಕ ಆಕೆಯ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಎರಗಿಸಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಘಟನೆಗೂ ಮೊದಲು ಬೈಕೊಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು ಮಹಿಳೆ ಒಂಟಿಯಾಗಿ ನಿಂತಿರುವುದನ್ನು ನೋಡಿದ್ದ ಆರೋಪಿ, ಬೈಕನ್ನು ದೂರದಲ್ಲಿ ನಿಲ್ಲಿಸಿ ಬಂದು ಈ ಕೃತ್ಯ ಎಸಗಿ,  ನಿರ್ಜನ ಕಾಡು ದಾರಿಯಲ್ಲಿ ಪರಾರಿಯಾಗಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News