ಉಡುಪಿ ಜಿಲ್ಲೆಯ ಅಡಿಕೆ ತೋಟಗಳಲ್ಲಿ ಕೊಳೆರೋಗ; ಪರಿಹಾರಕ್ಕೆ ಸೂಚನೆ

Update: 2022-08-05 16:28 GMT
ಸಾಂದರ್ಭಿಕ ಚಿತ್ರ

ಉಡುಪಿ, ಆ.5: ಕರಾವಳಿ ಜಿಲ್ಲೆಗಳಲ್ಲಿ ಜೂನ್ ತಿಂಗಳ ಅಂತ್ಯದಿಂದ ಜುಲೈ ತಿಂಗಳ ಮಧ್ಯ ಭಾಗದವರೆಗೆ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಅಡಿಕೆ ತೋಟಗಳಲ್ಲಿ ಅಡಿಕೆ ಕಾಯಿಗಳು ಉದುರುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಜುಲೈ 22ರಿಂದ 26ರವರೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ತಾಂತ್ರಿಕ ತಂಡವನ್ನು ರಚಿಸಿ ಮಾದರಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.

ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ ತಾಲೂಕಿನ ವ್ಯಾಪ್ತಿಯಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ ರೈತರ ತೋಟಗಳಲ್ಲಿ ಅಸಮರ್ಪಕ ಪೋಷಕಾಂಶ ನಿರ್ವಹಣೆ ಹಾಗೂ ಸಿಂಗಾರ ಕರಟುವ ರೋಗ ಮತ್ತು ಅಲ್ಪ ಪ್ರಮಾಣದಲ್ಲಿ ಕೊಳೆರೋಗ ಬಾಧೆ ಕಂಡುಬಂದಿದೆ.

ಕೊಳೆ ರೋಗ ಹಾನಿಯ ಪ್ರಮಾಣ ಹೆಚ್ಚಾಗಿ ಕಾಣಿಸಿಕೊಂಡಿರುವ ಪ್ರದೇಶದಲ್ಲಿ ಬಸಿಗಾಲುವೆ ಇಲ್ಲದೇ ಇರುವುದನ್ನು ತಂಡ ಗಮನಿಸಿದೆ. ವಿಜ್ಞಾನಿಗಳ ಸಲಹೆ ಯಂತೆ ಜಿಲ್ಲೆಯ ರೈತರು ಅನುಸರಿಸಬೇಕಾದ ಕ್ರಮಗಳು ಹೀಗಿವೆ.
*ಶೇ.1ರ ಬೋರ್ಡೊ ದ್ರಾವಣವನ್ನು ವೈಜ್ಞಾನಿಕ ವಿಧಾನ ಅನುಸರಿಸಿ ತಯಾರಿಸಿ ಸಿಂಪರಣೆ ಮಾಡಬೇಕು. *ಪೋಷಕಾಂಶಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. *ಅಡಿಕೆ ತೋಟಗಳಲ್ಲಿ ನೀರು ನಿಲ್ಲದಂತೆ ಬಸಿಗಾಲುವೆಗಳನ್ನು ರಚಿಸಬೇಕು. *ಹಾಲಿ ಅಡಿಕೆ ಮರದ ಬುಡದಲ್ಲಿ ಬಿದ್ದಿರುವ ಸಿಂಗಾರದ ಭಾಗಗಳು, ಅಡಿಕೆ ಗರಿಗಳನ್ನು ತೆಗೆದು ಸ್ಥಳ ಸ್ವಚ್ಛತೆ ಕ್ರಮಗಳನ್ನು ಅನುಸರಿಸಿದಲ್ಲಿ ರೋಗ ಹರಡುವಿಕೆ ತಡೆಗಟ್ಟಬಹುದಾಗಿದೆ ಎಂದು  ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News