ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ 3 ವರ್ಷ: ಪಿಡಿಪಿ, ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2022-08-05 18:12 GMT

ಶ್ರೀನಗರ, ಆ. 5: ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದ ಮೂರನೇ ವರ್ಷದ ಹಿನ್ನೆಲೆಯಲ್ಲಿ ಪಿಡಿಪಿ ಹಾಗೂ ಕಾಂಗ್ರೆಸ್ ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿತು ಹಾಗೂ ವಿಶೇಷ ಸ್ಥಾನಮಾನ ಪುನರ್ ಸ್ಥಾಪಿಸಲು ಹೋರಾಡುವ ಕುರಿತ ತಮ್ಮ ನಿರ್ಧಾರವನ್ನು ಮರು ಉಚ್ಚರಿಸಿತು. 

ನ್ಯಾಷನಲ್ ಕಾನ್ಫರೆನ್ಸ್ ಸಭೆ ನಡೆಸಿ ಮೂರು ವರ್ಷಗಳ ಹಿಂದೆ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಹಿಂದೆಗೆದುಕೊಳ್ಳುವ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿತು. ಕಾಶ್ಮೀರದಲ್ಲಿ ಶುಕ್ರವಾರ ಜನಜೀವನ ಸಹಜವಾಗಿತ್ತು. ಮಾರುಕಟ್ಟೆ, ಶಾಲೆ ಹಾಗೂ ಇತರ ಸಂಸ್ಥೆಗಳು ತೆರೆದಿದ್ದವು. 

‘‘ಬಂದ್ ಕರೆಯನ್ನು ಅನುಸರಿಸದೆ ಎಲ್ಲ ಅಂಗಡಿಗಳು ತೆರೆದಿದ್ದವು. ಶ್ರೀನಗರ ಜಿಲ್ಲೆಯಲ್ಲಿ ಸಂಪೂರ್ಣ ಸಹಜ ಸ್ಥಿತಿ ಇತ್ತು. ಇದು ಲಾಲ್ ಚೌಕ್ ಪ್ರದೇಶದ ದೃಶ್ಯಗಳು’’ ಎಂದು ಸಹಜ ಸ್ಥಿತಿಯನ್ನು ತೋರಿಸುವ ಲಾಲ್ ಚೌಕ್‌ನ ದೃಶ್ಯವಿರುವ 13 ಸೆಕೆಂಡ್‌ಗಳ ವೀಡಿಯೊವನ್ನು ಶ್ರೀನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ. 

ಮೆಹಬೂಬಾ ಮುಫ್ತಿ ಹಾಗೂ ಅವರ ಪಕ್ಷದ ಕಾರ್ಯಕರ್ತರು ಶೇರ್ ಎ ಕಾಶ್ಮೀರ್ ನಗರಸಭೆ ಉದ್ಯಾನದ ಸಮೀಪ ಇರುವ ಪಕ್ಷದ ಕಚೇರಿಯಲ್ಲಿ ಸೇರಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿರುವುದನ್ನು ಹಾಗೂ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂದೆಗೆದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. 

ಅವರು ಲಾಲ್ ಚೌಕ್‌ನತ್ತ ಜಾಥಾ ನಡೆಸಲು ಪ್ರಯತ್ನಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದ್ದ ಪೊಲೀಸರು ಅವರನ್ನು ತಡೆದರು.  ಈ ಸಂದರ್ಭ ಮಾತನಾಡಿದ ಮೆಹಬೂಬಾ ಮುಫ್ತಿ ಅವರು, ‘‘ಮುಂದಿನ ದಿನಗಳಲ್ಲಿ ದೇಶದ ಅಡಿಪಾಯವಾಗಿರುವ ಸಂವಿಧಾನವನ್ನು ನಾಶಗೊಳಿಸಲಿದ್ದಾರೆ. ಅವರು ತ್ರಿವರ್ಣ ಧ್ವಜದ ಬದಲು ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ. ಆದರೆ, ನಮ್ಮಿಂದ ಏನನ್ನು ಕಸಿದುಕೊಳ್ಳಲಾಗಿದೆಯೇ ಅದರ ವಿರುದ್ಧ ಹೋರಾಡಲು ನಾವು ನಿರ್ಧರಿಸಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News