ಗುಜರಾತ್: ರಸ್ತೆ ಬದಿಯ ತೆರೆದ ಚರಂಡಿಗೆ ಬಿದ್ದು ವಿದ್ಯಾರ್ಥಿನಿ ಮೃತ್ಯು!

Update: 2022-08-06 02:21 GMT

ಮೆಹ್ಸಾನಾ: ಶಾಲೆ ಬಿಟ್ಟು ಮನೆಗೆ ಸೈಕಲ್‍ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತೆರೆದ ಚರಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್‍ನ ಮೆಹ್ಸಾನಾ ಜಿಲ್ಲೆಯ ವಿಸ್ನಗರ್ ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.‌

ಜಿಯಾನಯಿ (14) ಎಂಬ ವಿದ್ಯಾರ್ಥಿನಿ ಶಾಲೆ ಮುಗಿಸಿ ಸೈಕಲ್‍ನಲ್ಲಿ ಬರುತ್ತಿದ್ದಾಗ ತಲೋಟಾ ಕ್ರಾಸ್‍ರೋಡ್ ಬಳಿ ರಸ್ತೆ ಬದಿಯ ತೆರೆದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾಗಿ ಪೊಲೀಸ್ ಇನ್‍ಸ್ಪೆಕ್ಟರ್ ಎಸ್.ಎಸ್.ನಿನಾಮಾ ಹೇಳಿದ್ದಾರೆ.

ಮಳೆ ನೀರಿನಿಂದ ರಸ್ತೆಯಲ್ಲಿ ನೀರು ನಿಂತಿತ್ತು. ಆದ್ದರಿಂದ ವಿದ್ಯಾರ್ಥಿನಿಗೆ ತೆರೆದ ಗಟಾರ ಗಮನಕ್ಕೆ ಬಾರದೇ ಅದಕ್ಕೆ ಬಿದ್ದಳು ಎಂದು ವಿಸ್ನಗರ್ ಪುರಸಭೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

"ತಕ್ಷಣವೇ ಕ್ರೇನ್ ಬಳಸಿ ಬಾಲಕಿಯ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಯಿತು. ಬಾಲಕಿಯನ್ನು ಚರಂಡಿಯಿಂದ ಹೊರಕ್ಕೆ ತೆಗೆದು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ" ಎಂದು ತಿಳಿಸಿದರು.

ಗುಜರಾತ್‍ನ ಆರೋಗ್ಯ, ಜಲ ಸಂಪನ್ಮೂಲ ಮತ್ತು ನೀರು ಸರಬರಾಜು ಖಾತೆ ಸಚಿವ ಹೃಷಿಕೇಶ್ ಪಟೇಲ್ ಅವರ ಕ್ಷೇತ್ರದಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News