ಹಿಂದು ದೇವರುಗಳ ಆಕ್ಷೇಪಾರ್ಹ ಚಿತ್ರ ಪ್ರಕಟ ಆರೋಪ: ಕ್ಷಮೆಯಾಚಿಸಿದ ದಿ ವೀಕ್

Update: 2022-08-06 07:21 GMT

ಹೊಸದಿಲ್ಲಿ: ಹಿಂದು ದೇವರುಗಳಾದ ಶಿವ ಮತ್ತು ಕಾಳಿಯ ಆಕ್ಷೇಪಾರ್ಹ ಚಿತ್ರಗಳನ್ನು ಪ್ರಕಟಿಸಿದ್ದಾರೆಂದು ಆರೋಪಿಸಿ ದಿ ವೀಕ್ (Theweek) ಸಂಪಾದಕರು ಮತ್ತು ಆಡಳಿತ ಮಂಡಳಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‍ಐಆರ್ ದಾಖಲಿಸಿದ ಮರುದಿನವೇ ದಿ ವೀಕ್ ತನ್ನ ಓದುಗರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆಯಾಚಿಸಿದೆ.

ಕಾಳಿ ಕುರಿತ ತಮ್ಮ ಅಂಕಣಕ್ಕೆ ಆಯ್ಕೆ ಮಾಡಿದ್ದ ಚಿತ್ರಕ್ಕೆ ಆಕ್ಷೇಪಿಸಿ  ತಾವು  ದಿ ವೀಕ್ ಜೊತೆಗಿನ ತಮ್ಮ ಸಂಬಂಧ ಮೊಟಕುಗೊಳಿಸುವುದಾಗಿ ಹೇಳಿ ಪ್ರಧಾನಿಯ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಬಿಬೇಕ್ ದೇಬ್ರಾಯ್ (bibek debroy) ಅವರು ಗುರುವಾರ ದಿ ವೀಕ್ ಸಂಪಾದಕ ಫಿಲಿಪ್ ಮ್ಯಾಥ್ಯೂ ಅವರಿಗೆ ಪತ್ರ ಬರೆದಿದ್ದರು.

ʼಎ ಟಂಗ್ ಆಫ್ ಫೈರ್ʼ (A Toungue of Fire) ಎಂಬ ಹೆಸರಿನ ಲೇಖನ ಜುಲೈ 24ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು, ಆದರೆ ಅದರ ಜೊತೆಗಿನ ತಂತ್ರ-ಆಧರಿತ ಚಿತ್ರಕ್ಕೂ ಲೇಖನಕ್ಕೂ ಹೊಂದಿಕೆಯಾಗಿಲ್ಲ. ಕಾಳಿಯ ಇತರ ಉತ್ತಮ ಚಿತ್ರಗಳನ್ನು ಪ್ರಕಟಿಸಬಹುದಾಗಿತ್ತು. ಉದ್ದೇಶಪೂರ್ವಕ ಪ್ರಚೋದನೆಗೆಂದೇ ಆ ಚಿತ್ರ ಆರಿಸಲಾಗಿತ್ತು ಎಂದು ಅವರು ಹೇಳಿದ್ದರು.

ಶುಕ್ರವಾರ ದಿ ವೀಕ್ ಉಸ್ತುವಾರಿ ಸಂಪಾದಕ ವಿ ಎಸ್ ಜಯಸ್‍ಚಂದ್ರನ್ ಅವರು ಹೇಳಿಕೆ ಬಿಡುಗಡೆಗೊಳಿಸಿ  "ಶಿವ ಮತ್ತು ಕಾಳಿಯ ಅಸೂಕ್ತ ಚಿತ್ರವನ್ನು ಪ್ರಕಟಿಸಿ ದುರದೃಷ್ಟವಶಾತ್ ದೋಷವಾಗಿದೆ. ಇದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ. ನಮ್ಮ ಹಲವು ಓದುಗರು ಮತ್ತು ಇತರರ ಭಾವನೆಗಳಿಗೆ ಇದರಿಂದ ನೋವುಂಟಾಗಿರುವುದಕ್ಕೆ  ಕ್ಷಮೆ ಕೋರುತ್ತೇವೆ ಹಾಗೂ ಅದನ್ನು ನಮ್ಮ ವೆಬ್‍ಸೈಟ್‍ನಿಂದ ತೆಗೆದಿದ್ದೇವೆ" ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಮಾಜಿ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶರ್ಮ ಅವರ ದೂರಿನ ಆಧಾರದಲ್ಲಿ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಶುಕ್ರವಾರ ಬಜರಂಗದಳ ಕಾರ್ಯಕರ್ತರು ಕಾನ್ಪುರ್‍ನ ಬಡಾ ಚೌರಾಹ ಪ್ರದೇಸದಲ್ಲಿ ಹಿಂದು ಮ್ಯಾಗಜೀನ್ ಪ್ರತಿಗಳನ್ನು ಸುಟ್ಟು ಹಾಕಿದ್ದಾರೆ.

ದಿ ವೀಕ್ ಪ್ರಕಟಿಸಿದ ಆ ನಿರ್ದಿಷ್ಟ ಚಿತ್ರ 19ನೇ ಶತಮಾನದ ಕಂಗ್ರಾ ಮಿನಿಯೇಚರ್ ಆಗಿತ್ತು ಹಾಗೂ ಬಾಲ್ಟಿಮೋರ್‍ನ ವಾಲ್ಟರ್ಸ್ ಆರ್ಟ್ ಮ್ಯೂಸಿಯಂನ ಸಂಗ್ರಹದ ಭಾಗವಾಗಿದೆ ಎಂದು ಶುದ್ಧಭ್ರತ ಸೇನಗುಪ್ತ ಎಂಬ ಚಿತ್ರ ಕಲಾವಿದ ತಮ್ಮ ಫೇಸ್ಬುಕ್ ಪುಟದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹಿಂದೂ ದೇವತೆಗಳ ಆಕ್ಷೇಪಾರ್ಹ ಚಿತ್ರ ಪ್ರಕಟ ಆರೋಪ: 'ದಿ ವೀಕ್' ವಿರುದ್ದ ಎಫ್ಐಆರ್ ದಾಖಲಿಸಿದ ಉತ್ತರಪ್ರದೇಶ ಪೊಲೀಸರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News