×
Ad

ಬಿಜೆಪಿ ನಾಯಕನೆಂದು ಗುರುತಿಸಿಕೊಂಡ ವ್ಯಕ್ತಿಯಿಂದ ಮಹಿಳೆಯ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು

Update: 2022-08-06 13:51 IST

ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾದ ಸೆಕ್ಟರ್ 93-ಬಿ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ತಾಳೆ ಗಿಡ ನೆಡುವ ವಿಚಾರದಲ್ಲಿ ಉಂಟಾದ  ಜಗಳದ ನಂತರ ಮಹಿಳೆಯೊಬ್ಬರನ್ನು ನಿಂದಿಸಿ ಅವರಿಗೆ ಹಲ್ಲೆಗೈದ ಆರೋಪದ ಮೇಳೆ ನೊಯ್ಡಾ ಪೊಲೀಸರು ಶ್ರೀಕಾಂತ್ ತ್ಯಾಗಿ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಹಲವಾರು ವೀಡಿಯೋಗಳು ಹರಿದಾಡುತ್ತಿದ್ದು ತಾಳೆ ಗಿಡಗಳನ್ನು ನೆಡುವುದರಿಂದ ಆಕೆ ಆತನನ್ನು ತಡೆದಾಗ ಆತ ಆಕೆಯನ್ನು ನಿಂದಿಸಿ ಆಕೆಯನ್ನು ದೂಡುತ್ತಿರುವುದು ಮತ್ತು ಆಕೆಯ ಪತಿಯನ್ನೂ ನಿಂದಿಸುತ್ತಿರುವುದು ಸ್ಪಷ್ಟವಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 354 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ತಾನು ಬಿಜೆಪಿ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಹಾಗೂ ಯುವ ಕಿಸಾನ್ ಸಮಿತಿಯ ರಾಷ್ಟ್ರೀಯ ಸಂಘಟಕ ಎಂದು ಆರೋಪಿ ಗುರುತಿಸಿಕೊಂಡಿದ್ದರೂ, ನೊಯ್ಡಾ ಬಿಜೆಪಿ ಮುಖ್ಯಸ್ಥ ಮನೋಜ್ ಗುಪ್ತಾ ಪ್ರತಿಕ್ರಿಯಿಸಿ ಆತ ಬಿಜೆಪಿ ಸದಸ್ಯನಲ್ಲ ಎಂದಿದ್ದಾರೆ.

ತಾಳೆ ಗಿಡಗಳನ್ನು ನೆಡಲು ಅನುಮತಿಯಿದೆ, ತಳಅಂತಸ್ತಿನಲ್ಲಿ ಫ್ಲ್ಯಾಟ್ ನೋಂದಣಿ ಮಾಡುವಾಗ ಶೇ 6ರಷ್ಟು ಸ್ಥಳ ಶುಲ್ಕವನ್ನು ಪಾವತಿಸಿರುವುದರಿಂದ ನನ್ನ ಮನೆ ಹೊರಗೆ ಗಿಡ ನೆಡಲು ನನಗೆ ಹಕ್ಕಿದೆ ಎಂದು ತ್ಯಾಗಿ ಹೇಳುತ್ತಿದ್ದರೂ ಸಂತ್ರಸ್ತೆ ಮಹಿಳೆ ಇದನ್ನು ನಿರಾಕರಿಸುತ್ತಿದ್ದಾರಲ್ಲದೆ ಆತ ತನ್ನ ಪತಿ, ಮಕ್ಕಳನ್ನೂ ನಿಂದಿಸಿದ್ದಾನೆ, ತನ್ನ ಗಿಡಗಳನ್ನು ಮುಟ್ಟಿದರೆ ಪರಿಸ್ಥಿತಿ ನೆಟ್ಟಗಾಗದು ಎಂದು ಹೇಳಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

2019ರಲ್ಲಿ ಈ ಹೌಸಿಂಗ್ ಸೊಸೈಟಿ ನಿವಾಸಿಗಳು ನೊಯ್ಡಾ ಪ್ರಾಧಿಕಾರ ಮತ್ತು ಗೌತಮ್ ಬುದ್ಧ ನಗರ ಪೊಲೀಸರಿಗೆ ತ್ಯಾಗಿ ವಿರುದ್ಧ ದೂರು ನೀಡಿ ಸೊಸೈಟಿಯ ಕಾಮನ್ ಏರಿಯಾದಲ್ಲಿರುವ ಹಸಿರು ಪ್ರದೇಶವನ್ನು ಆತ ಅತಿಕ್ರಮಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅತಿಕ್ರಮಣವನ್ನು 15 ದಿನಗಳೊಳಗೆ ತೆಗೆಯುವಂತೆ ನೊಯ್ಡಾ ಪ್ರಾಧಿಕಾರವು ತ್ಯಾಗಿಗೆ ಅಕ್ಟೋಬರ್ 16, 2019 ರಲ್ಲಿ ಸೂಚಿಸಿತ್ತು. ಈ ನೋಟಿಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿ ನೊಯ್ಡಾ ಪ್ರಾಧಿಕಾರ ತನಗೆ ಕಳೆದ ವರ್ಷ ಪತ್ರ ನೀಡಿದೆ ಎಂದು ತ್ಯಾಗಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News