ಪ್ರಧಾನಿಯ ʼರೇವ್ಡಿ ಸಂಸ್ಕೃತಿʼ ಪದ ಬಳಸಿ ಬಿಜೆಪಿ ಸರಕಾರಕ್ಕೇ ತಿರುಗೇಟು ನೀಡಿದ ವರುಣ್ ಗಾಂಧಿ

Update: 2022-08-06 11:53 GMT

ಹೊಸದಿಲ್ಲಿ: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಸಮಾರಂಭವೊಂದರಲ್ಲಿ ಬಿಜೆಪಿಯೇತರ ರಾಜ್ಯ ಸರಕಾರಗಳ ವಿರುದ್ಧ ಕಿಡಿಕಾರಿದ್ದ ಪ್ರಧಾನಿ ನರೇಂದ್ರ ಮೋದಿ 'ರೇವ್ಡಿ' ಸಂಸ್ಕೃತಿಯ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಹೇಳಿದ್ದರೆ ಇದೀಗ ಅದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯ ಪಿಲಿಭಿಟ್ ಸಂಸದ ವರುಣ್ ಗಾಂಧಿ (Varun Gandhi) ತಮ್ಮದೇ ಪಕ್ಷದ ಸರಕಾರವನ್ನು ವ್ಯಂಗ್ಯವಾಡಿದ್ದಾರೆ.

ದೇಶದ 80 ಕೋಟಿ ಜನರಿಗೆ ಉಚಿತ ರೇಷನ್(Free Ration) ನೀಡುತ್ತಿರುವುದಕ್ಕಾಗಿ ನರೇಂದ್ರ ಮೋದಿ ಸರಕಾರವನ್ನು ಅಭಿನಂದಿಸಬೇಕು ಎಂದು ಬಿಜೆಪಿ ಸಂಸದ ನಿಷಿಕಾಂತ್ ದುಬೆ ಹೇಳಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ವರುಣ್ ಗಾಂಧಿ, "ಬಡವರಿಗೆ 5 ಕೆಜಿ ಉಚಿತ ರೇಷನ್ ನೀಡುವುದಕ್ಕಾಗಿ ʼಧನ್ಯವಾದ ನಿರೀಕ್ಷಿಸುವʼ ಸದನವು ಅದೇ ಸಮಯ ಕಳೆದ ಐದು ವರ್ಷಗಳಲ್ಲಿ ರೂ 10 ಲಕ್ಷ ಕೋಟಿ ಮೌಲ್ಯದ ಸಾಲ ರೈಟ್ ಆಫ್ ಮಾಡಲಾಗಿದೆ ಎಂಬ ಮಾಹಿತಿಯನ್ನೂ ನೀಡುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

"ಮೆಹುಲ್ ಚೋಕ್ಸಿ (Mehul Choksi) ಮತ್ತು ರಿಷಿ ಅಗರ್ವಾಲ್ (Rishi Agarwal) ಅವರ ಹೆಸರುಗಳು ಉಚಿತ ರೇವ್ಡಿ ಪಟ್ಟಿಯಲ್ಲಿ ಮೇಲಿನ ಸ್ಥಾನಗಳಲ್ಲಿದೆ. ಸರಕಾರಿ ನಿಧಿಗೆ ಯಾರಿಗೆ ಮೊದಲ ಹಕ್ಕಿರುವುದು?" ಎಂದು ಪ್ರಶ್ನಿಸಿದ ವರುಣ್  ತಮ್ಮ ಪೋಸ್ಟ್ ಜೊತೆಗೆ ಇತ್ತೀಚೆಗೆ ವಿತ್ತ ರಾಜ್ಯ ಸಚಿವ ಭಗ್ವತ್ ಕೆ ಕರಡ್ ಅವರು ಒದಗಿಸಿದ ಅಂಕಿಅಂಶಗಳ ಪಟ್ಟಿಯನ್ನೂ ನೀಡಿದ್ದಾರೆ. ಅದಲ್ಲಿ ಮರುಪಾವತಿಯಾಗದ ಎಷ್ಟು ಸಾಲಗಳನ್ನು ಬ್ಯಾಂಕ್‍ಗಳು ರೈಟ್ ಆಫ್ ಮಾಡಿವೆ ಹಾಗೂ ಯಾರು ಗರಿಷ್ಠ ಮೊತ್ತದ ಸಾಲ ಮರುಪಾವತಿಸಿಲ್ಲ ಎಂಬ ಕುರಿತು ಮಾಹಿತಿಯಿದೆ.

ಇದನ್ನೂ ಓದಿ: 'ಸಮರ್ಥವಾಗಿ ಕಾರ್ಯನಿರ್ವಹಿಸಿ ಇಲ್ಲವೇ ಮನೆಗೆ ತೆರಳಲು ಸಿದ್ಧರಾಗಿ': ಬಿಎಸ್ಸೆನ್ನೆಲ್ ಉದ್ಯೋಗಿಗಳಿಗೆ ಸಚಿವರ ಎಚ್ಚರಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News