ಶಾಂತಿ ಭಂಗ ತಾರದಂತೆ ಪ್ರತಿವಾದಿಗಳಿಂದ ಮುಚ್ಚಳಿಕೆ

Update: 2022-08-06 15:32 GMT

ಅಜೆಕಾರು, ಆ.6: ಮುಂಡ್ಲಿ ಗ್ರಾಮದ ಜೆವಿಪಿ ಪ್ರಾಜೆಕ್ಟ್‌ನಲ್ಲಿ ವಿದ್ಯುತ್ ಉತ್ಪಾದಿಸಲು ನೀರು ತಡೆಯೊಡ್ಡಿದ ಪರಿಣಾಮ ಸಮೀಪದ ತೋಟಕ್ಕೆ ನೀರು ನುಗ್ಗಿ ಪರಿಸರದಲ್ಲಿ ಶಾಂತಿ ಕದಡುವ ಸಾಧ್ಯತೆಯನ್ನು ಮನಗಂಡು ಅಜೆಕಾರು ಪೊಲೀಸರು ಪ್ರತಿವಾದಿಗಳಿಂದ ಸೂಕ್ತ ಜಾಮೀನು ಮುಚ್ಚಳಿಕೆಯನ್ನು ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಕಳ ದುರ್ಗಾ ಗ್ರಾಮದ ತೆಳ್ಳಾರ್ ನಿವಾಸಿ ಚಾರ್ಲ್ಸ್ ಮಾಥ್ಯೂ(39), ಮಥಾಯಿ(66) ಎಂಬವರ ತೋಟಕ್ಕೆ ಮಳೆ ನೀರು ಹೋಗುವುದರಿಂದ ಮುಂಡ್ಲಿ ಗ್ರಾಮದ ಜೆವಿಪಿ ಪ್ರಾಜೆಕ್ಟ್‌ನಲ್ಲಿ ವಿದ್ಯುತ್ ಉತ್ಪಾದಿಸಲು ನೀರು ತಡೆ ಮಾಡಿದ ಗೇಟನ್ನು ತೆಗೆಯವಂತೆ ಪದೇ ಪದೇ ಪ್ರಾಜೆಕ್ಟ್‌ನ ಪರಿಸರದಲ್ಲಿ ಗಲಾಟೆ ಮಾಡುತ್ತಿದ್ದರೆಂದು ದೂರಲಾಗಿದೆ. ಇವರ ಕಿರುಕುಳ ತಾಳಲಾರದೆ ಪ್ರಾಜೆಕ್ಟ್‌ನ ಸಿಬ್ಬಂದಿ ನಾಗೇಶ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಎರಡೂ ಕಡೆಯವರನ್ನು ಪೊಲೀಸರು ಕರೆಸಿ ಸೂಕ್ತ ತಿಳುವಳಿಕೆ ನೀಡಲಾಗಿತ್ತು. ಇದೀಗ ಮತ್ತೆ ಭಾರೀ ಮಳೆಯಿಂದ ಪ್ರಾಜೆಕ್ಟ್‌ನಲ್ಲಿ ಗೇಟನ್ನು ತೆಗೆಯದಿದ್ದರೆ ನೀರು ಪ್ರತಿವಾದಿಗಳ ತೋಟಕ್ಕೆ ನುಗ್ಗಿ ಇವರ ಮಧ್ಯೆ ಗಲಾಟೆ, ದೊಂಬಿ ನಡೆದು ಶಾಂತಿ ಕದಡುವ ಹಾಗೂ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಪ್ರತಿವಾದಿಗಳು ಸ್ಥಳೀಯ ರಾಜಕೀಯ ಮುಖಂಡರ ಬೆಂಬಲ ಹೊಂದಿದ್ದು ಯಾವುದೇ ಕ್ರಿಮಿನಲ್ ಕೃತ್ಯ ಎಸಗಲು ಹಿಂಜರಿಯದ ಪ್ರವೃತ್ತಿಯ ವರಾಗಿದ್ದಾರೆ. ಆದುದರಿಂದ ಪ್ರತಿವಾದಿಗಳಿಂದ ಪರಿಸರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಸೂಕ್ತ ಜಾಮೀನು ಮುಚ್ಚಳಿಕೆಯನ್ನು ಪಡೆದು ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News