ಕೋವಿಡ್ ಸೋಂಕು ಪ್ರಕರಣಗಳ ಏರಿಕೆ : 6 ರಾಜ್ಯಗಳು, ದಿಲ್ಲಿಗೆ ಕೇಂದ್ರ ಸರಕಾರ ಪತ್ರ

Update: 2022-08-06 18:19 GMT

ಹೊಸದಿಲ್ಲಿ, ಆ. 6: ಸಾಕಷ್ಟು ಕೋವಿಡ್ ಪರೀಕ್ಷೆ, ಸಾಂಕ್ರಾಮಿಕ-ಸೂಕ್ತ ನಡವಳಿಕೆಯ ಉತ್ತೇಜನ, ಲಸಿಕೆಯ ಹಂತದ ಹೆಚ್ಚಳದ ಖಾತರಿ ನೀಡಲು ಪ್ರಾಧಿಕಾರಗಳಿಗೆ ಸೂಚಿಸುವಂತೆ ಕೇಂದ್ರ ಸರಕಾರ 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ದಿಲ್ಲಿಗೆ ಶುಕ್ರವಾರ ಪತ್ರ ಬರೆದಿದೆ. 

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ದಿಲ್ಲಿ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಹಾಗೂ ತೆಲಂಗಾಣಕ್ಕೆ ಪತ್ರ ಬರೆದಿದ್ದಾರೆ. ಮುಂದಿನ ಉತ್ಸವ ಕಾಲದ ಸಂದರ್ಭ ಕೋವಿಡ್ ಹರಡುವಿಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಭೂಷಣ್ ಮುನ್ನೆಚ್ಚರಿಕೆ ನೀಡಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ದಿಲ್ಲಿಯಲ್ಲಿ ಪ್ರತಿ ದಿನ ಅತ್ಯಧಿಕ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಭೂಷಣ್ ಅವರು ಗಮನ ಸೆಳೆದಿದ್ದಾರೆ. ಹೊಸದಿಲ್ಲಿಯಲ್ಲಿ ಕಳೆದ 6 ತಿಂಗಳಲ್ಲಿ ಗುರುವಾರ ಅತ್ಯಧಿಕ ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ನಿರಂತರ ಎರಡನೇ ದಿನ ಸೋಂಕು ಪ್ರಕರಣಗಳ ಸಂಖ್ಯೆ 2000 ಗಡಿಯನ್ನು ದಾಟಿತ್ತು.   ನಿರಂತರ ನಾಲ್ಕನೇ ದಿನ ಪಾಸಿಟಿವಿಟಿ ದರ ಶೇ. 10ಕ್ಕಿಂತ ಹೆಚ್ಚಿತ್ತು. ನಗರದಲ್ಲಿ ವಾರದ ಕೋವಿಡ್ ಪಾಸಿಟಿವಿಟಿ ದರ ಜುಲೈ 29ರಂದು ಅಂತ್ಯಗೊಂಡ 7 ದಿನಗಳ ಅವಧಿಯ ಶೇ. 5.90ಕ್ಕಿಂತ ಈ ವಾರ ಶೇ. 9.86ಕ್ಕೆ  ಏರಿಕೆಯಾಗಿದೆ.  
ಜುಲೈಯಲ್ಲಿ ಪ್ರತಿ ದಿನ ಸರಾಸರಿ 2,347 ಪ್ರಕರಣಗಳು ಕೇರಳದಲ್ಲಿ, ಮಹಾರಾಷ್ಟ್ರದಲ್ಲಿ 2,135 ಪ್ರಕರಣಗಳು ವರದಿಯಾಗಿದೆ ಎಂದು ಪತ್ರದಲ್ಲಿ ಭೂಷಣ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಪ್ರಯಾಣಿಕರ ನಿಗದಿತ ಮಾದರಿಯ ಜೆನೋಮ್ ಸೀಕ್ವೆನ್ಸಿಂಗ್ ಹಾಗೂ ಹೊಸ ಕೋವಿಡ್ ಪ್ರಕರಣಗಳ ಸ್ಥಳೀಯ ಗುಂಪಿನಿಂದ ಮಾದರಿ ಸಗ್ರಹಿಸುವುದಕ್ಕೆ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ಭೂಷಣ್ ಅವರು ಪತ್ರದಲ್ಲಿ ಹೇಳಿದ್ದಾರೆ. 
ಕೋವಿಡ್ ಸೋಂಕು ಇನ್ನಷ್ಟು ಹರಡುವುದನ್ನು ತಡೆಯಲು ಅತ್ಯಧಿಕ ಪ್ರಕರಣಗಳು, ಪಾಸಿಟಿವಿಟಿ ದರ ಹಾಗೂ ಸಮೂಹಗಳ ಜಿಲ್ಲಾ ವರದಿಯನ್ನು ಕೂಲಂಕುಷ ಪರಿಶೀಲನೆ ನಡೆಸಬೇಕು ಎಂದು ಕೂಡ ರಾಜ್ಯಗಳಿಗೆ ಅವರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News