ಮಧ್ಯಪ್ರದೇಶ: ಪತ್ನಿ ಬದಲು ಪತಿ ಪ್ರಮಾಣ ಪ್ರಕರಣ; ಗ್ರಾಮ ಪಂಚಾಯತ್ ಅಧಿಕಾರಿಯ ಅಮಾನತು

Update: 2022-08-06 18:26 GMT

ದಾಮೋಹ್, ಆ. 6:   ನೂತನ ಸರಪಂಚರಾಗಿ ಆಯ್ಕೆಯಾದ ಮಹಿಳೆಯ ಬದಲು ಆಕೆಯ ಪತಿ ಪ್ರಮಾಣ ವಚನ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿ ಗೈಸಾಬಾದ್ ಗ್ರಾಮ ಪಂಚಾಯತ್‌ನ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ದಾಮೋಹ್‌ನ ಹಟ್ಟಾ ಬ್ಲಾಕ್‌ನ ಗೈಸಾಬಾದ್ ಪಂಚಾಯತ್‌ನ ಸರಪಂಚರಾಗಿ ಪರಿಶಿಷ್ಟ ‌ಜಾತಿಗೆ ಸೇರಿದ ಮಹಿಳೆ ಆಯ್ಕೆಯಾಗಿದ್ದರು. ಇತರ 11 ಮಹಿಳೆಯರು ಸದಸ್ಯರಾಗಿ ಆಯ್ಕೆಯಾಗಿದ್ದರು. ಆದರೆ, ಸರಪಂಚರಾಗಿ ಆಯ್ಕೆಯಾದ ಮಹಿಳೆ ಬದಲು ಆಕೆಯ ಪತಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಕಾರ್ಯಕ್ರಮದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. 

ಮಹಿಳೆಯ ಪತಿಗೆ ಪ್ರಮಾಣ ವಚನ ಬೋಧಿಸಿದ ಜೈಸಿಂಗಾರ್ ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ ಆಶಾರಾಮ್ ಸಾಹು ಅವರನ್ನು ಸಾಗರ್ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಕ್ರವಾರ ಅಮಾನತುಗೊಳಿಸಿದ್ದಾರೆ. 

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹಲವು ಸೂಚನೆಗಳನ್ನು ನೀಡಿದ ಹೊರತಾಗಿಯೂ ಸರಂಪಚರಾಗಿ ಆಯ್ಕೆಯಾದ ಮಹಿಳೆ ತನ್ನ ಪತಿಯನ್ನು ಕಳುಹಿಸಿದ್ದರು. ಆದುದರಿಂದ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಲಾಯಿತು ಎಂದು ಶಾಹು ಸುದ್ದಿಗಾರರಿಗೆ ತಿಳಿಸಿದ್ದಾರೆ. 

ದಾಮೋಹ್ ಜಿಲ್ಲೆಯ ಜಿಲ್ಲಾಧಿಕಾರಿ ಎಸ್ ಕೃಷ್ಣ ಚೈತನ್ಯ ಅವರು ಈ ಪ್ರಕರಣದ ಕುರಿತು ಗೈಸಾಬಾದ್ ಹಾಗೂ ಪಿಪಾರಿಯಾ ಕಿರಾವು ಗ್ರಾಮಗಳ   ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಂದ ವರದಿ ಕೋರಿದ್ದಾರೆ. ವರದಿ ಸ್ವೀಕರಿಸಿದ ಬಳಿಕ ಪಂಚಾಯತ್ ಕಾರ್ಯದರ್ಶಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚೈತನ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News