ಅಯೋಧ್ಯೆಯಲ್ಲಿ ಅಕ್ರಮ ನಿವೇಶನ ಮಾರಾಟ: ಬಿಜೆಪಿ ಶಾಸಕ ಸೇರಿದಂತೆ 40 ಮಂದಿ ವಿರುದ್ಧ ಆರೋಪ

Update: 2022-08-07 12:35 GMT

ಅಯೋಧ್ಯೆ: ಇಲ್ಲಿನ ಮೇಯರ್, ಸ್ಥಳೀಯ ಬಿಜೆಪಿ ಶಾಸಕ ಮತ್ತು ಪಕ್ಷದ ಮಾಜಿ ಶಾಸಕ ಸೇರಿದಂತೆ 40 ಜನರು ಅಕ್ರಮವಾಗಿ ನಿವೇಶನಗಳನ್ನು ಮಾರಾಟ ಮಾಡಿ, ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದ್ದಾರೆ ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಆರೋಪಿಸಿದೆ.

ಮೇಯರ್ ರಿಷಿಕೇಶ್ ಉಪಾಧ್ಯಾಯ ಮತ್ತು ಶಾಸಕ ವೇದ್ ಪ್ರಕಾಶ್ ಗುಪ್ತಾ ಅವರು ತಮ್ಮನ್ನು ನಿರಪರಾಧಿ ಎಂದು ಹೇಳಿಕೊಂಡಿದ್ದು, ಪ್ರಾಧಿಕಾರವು ಬಿಡುಗಡೆ ಮಾಡಿದ ಆಪಾದಿತ ಅಪರಾಧಿಗಳ ಪಟ್ಟಿಯಲ್ಲಿ ಪಿತೂರಿ ಇದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

‘ಪ್ರಾಧಿಕಾರ ಪ್ರದೇಶದಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿ ಮಾರಾಟ ಮಾಡಿದ ಹಾಗೂ ನಿರ್ಮಾಣ ಕಾಮಗಾರಿ ಪಡೆದ 40 ಮಂದಿಯ ಪಟ್ಟಿಯನ್ನು ಶನಿವಾರ ರಾತ್ರಿ ಪ್ರಾಧಿಕಾರ ನೀಡಿದೆ’ ಎಂದು ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್ ಸಿಂಗ್ ಭಾನುವಾರ ಪಿಟಿಐಗೆ ತಿಳಿಸಿದ್ದಾರೆ. ಎಲ್ಲ 40 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಉಪಾಧ್ಯಾಯ ಮತ್ತು ಗುಪ್ತಾ ಅವರು ತಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದು, ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ಮಿಲ್ಕಿಪುರದ ಬಿಜೆಪಿಯ ಮಾಜಿ ಶಾಸಕ ಗೋರಖನಾಥ್ ಬಾಬಾ ಅವರ ಹೆಸರೂ ಆರೋಪಿಗಳ ಪಟ್ಟಿಯಲ್ಲಿದೆ.

ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಪ್ರತಿಪಕ್ಷಗಳು ಅಯೋಧ್ಯೆಯಲ್ಲಿ ಅಕ್ರಮ ಭೂಮಿ ಖರೀದಿ ಮತ್ತು ಮಾರಾಟದ ವಿಷಯವನ್ನು ಪ್ರಸ್ತಾಪಿಸಿದ್ದವು. ಅಲ್ಲದೆ, ಈ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಸ್ಥಳೀಯ ಸಂಸದ ಲಲ್ಲು ಸಿಂಗ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು. ಪಟ್ಟಿ ಬಹಿರಂಗವಾಗುತ್ತಿದ್ದಂತೆ ಸಮಾಜವಾದಿ ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News