ವೈಚಾರಿಕ ಸ್ಪಷ್ಟತೆ, ತಾತ್ವಿಕ ಬದ್ಧತೆ 4 ದಶಕಗಳಿಂದ ಸಿದ್ದರಾಮಯ್ಯರಲ್ಲಿ ಬದಲಾಗಿಲ್ಲ: ವೈ.ಎಸ್.ವಿ.ದತ್ತ

Update: 2022-08-07 15:04 GMT

ಬ್ರಹ್ಮಾವರ, ಉಡುಪಿ, ಆ.7: ಎಡಪಂಥೀಯ ಆಲೋಚನೆ, ಪ್ರಗತಿಪರ ಧೋರಣೆ, ಬಲಪಂಥೀಯತೆಯನ್ನು ಖಂಡತುಂಡವಾಗಿ ಖಂಡಿಸುವ ನಿಷ್ಠುರತೆ, ನಿರ್ದಾಕ್ಷಿಣ್ಯ ಸ್ವಭಾವ ಸಿದ್ದರಾಮಯ್ಯರಲ್ಲಿದೆ. ಅವರ ನಿಲುವು 80ರ ದಶಕದಿಂದ ಇಂದಿನವರೆಗೆ ಸ್ವಲ್ಪವೂ ಬದಲಾಗಿಲ್ಲ ಎಂದು ಕಡೂರಿನ ಮಾಜಿ ಶಾಸಕ ಹಾಗೂ ಪ್ರಗತಿಪರ ನಿಲುವಿನ ರಾಜಕಾರಣಿ ವೈ.ಎಸ್.ವಿ.ದತ್ತ ಹೇಳಿದ್ದಾರೆ.

ಸಿದ್ದರಾಮಯ್ಯ ಅಭಿಮಾನಿ ಬಳಗ, ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಬ್ರಹ್ಮಾವರದ ಬಂಟರ ಭವನದಲ್ಲಿ ರವಿವಾರ ಆಯೋಜಿಸಿದ್ದ ‘ಜನನಾಯಕ ಸಿದ್ದರಾಮಯ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದು ಇಡೀ ರಾಜ್ಯ ಸಿದ್ದರಾಮಯ್ಯನವರತ್ತ ನೋಡುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ಮೊನ್ನೆ ನಡೆದ ದಾವಣಗೆರೆ ಸಮಾವೇಶ. ಇಡೀ ರಾಜ್ಯದ ನದಿಗಳು  ದಾವಣಗೆರೆ ಕಡೆಗೆ ಹರಿದುಕೊಂಡು ಹೋಗಿದ್ದವು. ಅದರರ್ಥ ರಾಜ್ಯದ ಎಲ್ಲಾ ನದಿಗಳು ತಮ್ಮ ದಿಕ್ಕನ್ನೇ ಬದಲಿಸಿದವು. ಆ ಮೂಲಕ ರಾಜ್ಯಕ್ಕೆ ಒಂದು ಸಂದೇಶ ರವಾನೆಯಾಯಿತು. ರಾಜ್ಯದ ಇಂದಿನ ಆಯೋಮಯ, ಧ್ವೇಷಪೂರಿತ  ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಆರೋಗ್ಯಕರ ಆಶಾಕಿರಣವಾಗಿ ಗೋಚರವಾಗುತಿದ್ದಾರೆ ಎಂದರು.

ರಾಜ್ಯದ ಜನತೆ ಅವರತ್ತ ಒಂದು ನಿರೀಕ್ಷೆ, ಒಂದು ಅಪೇಕ್ಷೆ, ಒಂದು ಆಸೆ,  ಒಂದು ಭರವಸೆಯೊಂದಿಗೆ ಅವರತ್ತ ನೋಡುತ್ತಿದೆ. ಅವರ ನಿಲುವು ಅಂದಿನಿಂದ ಇಂದಿನವರೆಗೆ ಬದಲಾಗಿಲ್ಲ. ಅವರ ನಿಲುವು ಸ್ಥಿರವಾಗಿಯೇ ಉಳಿದಿದೆ. ಹೀಗಾಗಿ ಅವರ ಅನಿವಾರ್ಯತೆ, ಅಗತ್ಯತೆ ರಾಜ್ಯಕ್ಕಿದೆ. ರಾಜ್ಯ ಅವರ ಮಾರ್ಗದರ್ಶನವನ್ನು ಬಯಸುತ್ತಿದೆ. ಸುಪ್ತ ಮನಸ್ಸು ಕೂಡಾ ಸಿದ್ದರಾಮಯ್ಯ ರನ್ನು ಬಯಸುತ್ತದೆ. ಅಂಥ ಧ್ವನಿಗಳೆಲ್ಲವೂ ಗಟ್ಟಿಯಾಗಿ ಹುರಿಗಟ್ಟಬೇಕಿದೆ, ಗರಿಗಟ್ಟಬೇಕಿದೆ. ಅದಕ್ಕೊಂದು ಸ್ಪಷ್ಟ ರೂಪ ಬರಬೇಕಾಗಿದೆ. ಅದಕ್ಕೆ ಇಂಥ ವಿಚಾರಸಂಕಿರಣಗಳು ಪೂರಕವಾಗಬೇಕಿದೆ ಎಂದರು.

ಕರಾವಳಿಗೆ ಅಗತ್ಯ: ನಾವು ಮತಾಂಧ ಶಕ್ತಿಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಆದರೆ ಎಲ್ಲೊ ಒಂದು ಕಡೆ ತಕ್ಷಣಕ್ಕೆ ಬದಲಾಗಬೇಕಿರುವುದು ಮಲೆನಾಡು ಹಾಗೂ ಕರಾವಳಿಯ ಜಿಲ್ಲೆಗಳು. ವೈಚಾರಿಕ ಸ್ಪಷ್ಟತೆ ಹಾಗೂ ತಾತ್ವಿಕ ಬದ್ಧತೆಯನ್ನು ಹೊಂದಿರುವ ಸಿದ್ದರಾಮಯ್ಯ ಅವರಿಂದ ಮಾತ್ರ ಕರಾವಳಿ ಮತ್ತು ಮಲೆನಾಡಿನಲ್ಲಿ ಪರಿವರ್ತನೆ ಸಾಧ್ಯ ಎಂದು  ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟರು. 

ಸಿದ್ದರಾಮಯ್ಯರನ್ನು ಈ ನೆಲದಲ್ಲಿ ಓಡಾಡಿಸಬೇಕಿದೆ. ಅವರನ್ನು ಹೆಚ್ಚೆಚ್ಚು ಪರಿಚಯಿಸಬೇಕಿದೆ. ಅವರ ತಾತ್ವಿಕ ಧೋರಣೆಗಳ ಮೇಲೆ ಬೆಳಕು ಚೆಲ್ಲಬೇಕಿದೆ.  ಅವರ ಧ್ವನಿ ದಕ್ಷಿಣ ಕರ್ನಾಟಕ ಭಾಗಕ್ಕೆ ಅಗತ್ಯವಿಲ್ಲ. ಕರಾವಳಿ, ಮಲೆನಾಡಿಗೆ ಅಗತ್ಯವಿದೆ ಎಂದರು.

ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ಅವರೆಂದೂ ಸಣ್ಣತನವನ್ನು ತೋರಲಿಲ್ಲ. ಅವರಲ್ಲಿ ವಿರೋಧ ಪಕ್ಷದವರೆನ್ನುವ ತಾರತಮ್ಯವಿರಲಿಲ್ಲ. ತಾಳ್ಮೆ, ಸೌಜನ್ಯ ಅವರಲ್ಲಿತ್ತು. ಆದರೆ ಇಂದು ಬಿಜೆಪಿ ಪಕ್ಷದಲ್ಲಿ ಅತೀ ಹೆಚ್ಚು ತಾರತಮ್ಯವನ್ನು ನಾವು ಕಾಣುತ್ತಿರುವುದು ವಿಪರ್ಯಾಸವೇ ಸರಿ. ಹೀಗಾಗಿ ಸಿದ್ದರಾಮಯ್ಯನವರ ಅಗತ್ಯತೆ ರಾಜ್ಯಕ್ಕೆ ಇದೆ ಎಂದ ದತ್ತ ತಾನು ಸಿದ್ದರಾಮಯ್ಯರ ಹೊಗಳುಭಟನಲ್ಲ. ಆದರೆ ಅವರ ಅಭಿಮಾನಿ ಎಂದರು. 

ಸಿದ್ದರಾಮಯ್ಯ ಜನನಾಯಕ: ಮುಖ್ಯಭಾಷಣ ಮಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಸಿದ್ದರಾಮಯ್ಯ ಜನರನ್ನು ಇಷ್ಟಪಡುತ್ತಾರೆ. ಜನರ ಮಧ್ಯ ಇರುವುದನ್ನು ಇಷ್ಟ ಪಡುತ್ತಾರೆ. ಪ್ರಾಯಶ: ಇಂಥ ರಾಜಕೀಯದ ಕೊನೆಯ ತಲೆಮಾರು ಸಿದ್ದರಾಮಯ್ಯ ಆಗಿರಬಹುದು. ಅದೇ ರೀತಿ ಕೊಟ್ಟ ಮಾತು, ಚುನಾವಣೆಗೆ ಮುನ್ನ ಪ್ರಕಟಿಸಿದ ಪ್ರಣಾಳಿಕೆಯನ್ನು ಮುಂದಿಟ್ಟು ಮತ ಕೇಳಿದ ಏಕೈಕ ಮುಖ್ಯಮಂತ್ರಿಯೂ ಇವರಾಗಿರಬಹುದು ಎಂದರು.

ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ 165 ಭರವಸೆಗಳನ್ನು ಐದು ವರ್ಷಗಳಲ್ಲಿ ಈಡೇರಿಸಿದ, ಇದರೊಂದಿಗೆ 30 ಹೆಚ್ಚುವರಿ ಕಾರ್ಯಕ್ರಮಗಳನ್ನು ನೀಡಿದ ಮುಖ್ಯಮಂತ್ರಿ ಇವರಾಗಿದ್ದರು. ಐದು ವರ್ಷಗಳ ತಮ್ಮ ಸಾಧನೆಯನ್ನು ಜನರ ಮುಂದಿಟ್ಟು ಮುಂದಿನ ಚುನಾವಣೆ ಎದುರಿಸಿದ ಸಿದ್ದರಾಮಯ್ಯ, ತಮ್ಮ ಸ್ವಪಕ್ಷೀಯರ ಎಡಬಿಡಂಗಿತನ, ಬಿಜೆಪಿಯ ಅಪಪ್ರಚಾರದ ಅಬ್ಬರದ ಮಧ್ಯೆ ಸೋಲಬೇಕಾಯಿತು ಎಂದು ವಿಶ್ಲೇಷಿಸಿದರು.

ರಾಜಕಾರಣಿಗಳ ಮೇಲೆ ಇಂದಿರುವ ದೊಡ್ಡ ಆರೋಪ ವಚನ ಭ್ರಷ್ಟತೆ. ಆದರೆ ಇದಕ್ಕೆ ಸಿದ್ದರಾಮಯ್ಯ ಅಪವಾದ. ತಾನು ಮುಖ್ಯಮಂತ್ರಿಯಾಗಿ ವಚನ ಸ್ವೀಕರಿಸಿದ ತಕ್ಷಣ ಅವರು ರಾಜ್ಯದ ಬಡವರಿಗಾಗಿ ಘೋಷಿಸಿದ ಕಾರ್ಯಕ್ರಮ ಅನ್ನಭಾಗ್ಯ ಎಂದು ವಿವರಿಸಿದರು.

ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕೋಮುವಾದಿಗಳು ತುಂಬಿಲ್ಲ. ಇಲ್ಲಿನ ಜನ ಕೋಮುವಾದಿಗಳಲ್ಲ ಎಂದು ನುಡಿದ ರಾಜಕೀಯ ವಿಶ್ಲೇಷಕ ದಿನೇಶ್ ಅಮೀನ್ ಮಟ್ಟು, 2013ರ ಚುನಾವಣೆಯಲ್ಲಿ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಗೆದ್ದಿರುವುದು ಕೇವಲ ಒಂದೊಂದು ಸ್ಥಾನ ಮಾತ್ರ ಎಂದರು.

ದೇವರಾಜ ಅರಸು, ಬಂಗಾರಪ್ಪ, ಯಡಿಯೂರಪ್ಪ ಅವರಂಥೆ ಸಿದ್ದರಾಮಯ್ಯ ಸಹ ‘ಮಾಸ್ ಲೀಡರ್’. ಈಗಲೂ ಸಿದ್ದರಾಮಯ್ಯರಲ್ಲಿ ಓಟು ತರುವ ಶಕ್ತಿ ಇದೆ. 2018ರ ಹಿನ್ನಡೆಯ ನಂತರವೂ ಅವರು ಈಗಲೂ ಸದಾ ಚಟುವಟಿಕೆ ಯಿಂದಿರುವ ಸಿದ್ದರಾಮಯ್ಯ, ಜನರ ಮೇಲೆ ಇರುವ ಪ್ರೀತಿಯ ಕಾರಣಕ್ಕೆ ಇದನ್ನು ಮಾಡುತಿದ್ದಾರೆ ಎಂದರು.

ಸಿದ್ದರಾಮಯ್ಯರನ್ನು ದಲಿತ ವಿರೋಧಿ, ಹಿಂದು ವಿರೋಧಿ ಎಂಬಂತೆ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ ಸತ್ಯ ಇದಕ್ಕೆ ವ್ಯತಿರಿಕ್ತವಾಗಿದೆ. ಅವರು ದಲಿತರಿಗಾಗಿ ನೀಡಿದಷ್ಟು ಕಾರ್ಯಕ್ರಮಗಳನ್ನು ಯಾರೂ ನೀಡಿಲ್ಲ. ಸಮಾಜದ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತ ಬಲ್ಲ ಏಕೈಕ ವ್ಯಕ್ತಿ ಸಿದ್ದರಾಮಯ್ಯ, ಅವರ ಅಂತರಂಗ- ಬಹಿರಂಗ ಒಂದೇ ಆಗಿತ್ತು ಎಂದು ದಿನೇಶ್ ಅಮೀನ್ ನುಡಿದರು.

ಲೇಖಕ-ಅಂಕಣಕಾರ ಶಿವಮೊಗ್ಗದ ಬಿ.ಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ನಿರಂಜನ ಹೆಗ್ಡೆ, ದಸಂಸ ಮುಖಂಡ ಜಯನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲೀಂ ಒಕ್ಕೂಟದ ಅಧ್ಯಕ್ಷ ಜನಾಬ್ ಕೋಟ ಇಬ್ರಾಹಿಂ ಸಾಹೇಬ್, ಕೆಥೋಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ವಲೇರಿಯನ್ ಮಿನೇಜಸ್, ಸಾಮಾಜಿಕ ಹೋರಾಟಗಾರ್ತಿ ಗೌರಿ ಕೆಂಜೂರು, ಸಾಸ್ತಾನ ಸಿ.ಎ ಬ್ಯಾಂಕ್ ಅಧ್ಯಕ್ಷ ಶ್ರೀಧರ್ ಪಿಎಸ್, ಬೈಂದೂರಿನ ಡಾ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ನ್ಯಾಯವಾದಿ ಮಂಜುನಾಥ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ಹೆಮ್ಮಾಡಿ ವಂದಿಸಿದರು. ಸಿದ್ದರಾಮಯ್ಯ ಕುರಿತು ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News