ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಅಪರಾಧದಲ್ಲಿ ಭಾಗಿಯಾಗಿದ್ದ ಬೈಕ್ ಸವಾರನನ್ನು ಗುರುತಿಸಿದ ಅಂಗಡಿಕಾರ

Update: 2022-08-07 16:19 GMT

ಧಾರವಾಡ, ಆ.7: ಇಲ್ಲಿಯ ಸೆಷನ್ಸ್ ನ್ಯಾಯಾಲಯದಲ್ಲಿ ಶನಿವಾರ ಪ್ರೊ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆ ಸಂದರ್ಭ ಸ್ವತಂತ್ರ ಸಾಕ್ಷಿಯೋರ್ವರು ಹಂತಕನನ್ನು ಕಲಬುರ್ಗಿಯವರ ನಿವಾಸಕ್ಕೆ ಕರೆತಂದಿದ್ದ ಬೈಕ್ ಸವಾರನನ್ನು ಗುರುತಿಸಿದ್ದಾರೆ.

ಸಾಕ್ಷಿ ಕಲಬುರ್ಗಿಯವರ ನಿವಾಸದ ಎದುರು ಪುಟ್ಟ ಅಂಗಡಿಯೊಂದನ್ನು ಹೊಂದಿದ್ದಾರೆ. ಪ್ರವೀಣ್ ಚತುರ್ ನನ್ನು 2015ರಲ್ಲಿ ಕಲಬುರ್ಗಿಯವರ ಹತ್ಯೆ ನಡೆದಾಗ ನಿವಾಸದ ಹೊರಗೆ ಬೈಕಿನಲ್ಲಿ ಕಾಯುತ್ತಿದ್ದ ವ್ಯಕ್ತಿ ಎಂದು ಅವರು ಬೊಟ್ಟು ಮಾಡಿದ್ದಾರೆ. ಚತುರ್ ಮೂಲಭೂತ ಬಲಪಂಥೀಯ ಸಂಘಟಿತ ಅಪರಾಧ ಸಿಂಡಿಕೇಟ್ ನ ಭಾಗವಾಗಿದ್ದ.

ಅಂಗಡಿ ಮಾಲಿಕರು ಕಲಬುರ್ಗಿ ಹತ್ಯೆಯಲ್ಲಿ ಭಾಗಿಯಾಗಿದ್ದ ದುಷ್ಕರ್ಮಿಗಳನ್ನು ಗುರುತಿಸಿರುವ ಮೂರನೇ ಪ್ರತ್ಯಕ್ಷದರ್ಶಿ ಸಾಕ್ಷಿಯಾಗಿದ್ದಾರೆ. ಈ ವರ್ಷದ ಆದಿಯಲ್ಲಿ ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದು, ನ್ಯಾಯಾಲಯವು ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆಯನ್ನು ನಡೆಸುತ್ತಿದೆ.

ಹತ್ಯೆಯ ಸಂದರ್ಭ ಮನೆಯಲ್ಲಿಯೇ ಇದ್ದ ಕಲಬುರ್ಗಿಯವರ ಪುತ್ರಿ ರೂಪದರ್ಶಿ ಕೆ. ಮಾ.17 ರಂದು ನ್ಯಾಯಾಲಯದಲ್ಲಿ ಗಣೇಶ್ ಮಿಸ್ಕಿನ್ ನನ್ನು ತನ್ನ ತಂದೆಗೆ ಗುಂಡಿಕ್ಕಿದ್ದ ವ್ಯಕ್ತಿಯೆಂದು ಗುರುತಿಸಿದ ಬಳಿಕ ದುಃಖದಿಂದ ಕುಸಿದಿದ್ದರು. ಮನೆಯ ಹೊರಗೆ ಬೈಕ್ ನಲ್ಲಿ ಹಂತಕನಿಗಾಗಿ ಕಾಯುತ್ತಿದ್ದ ವ್ಯಕ್ತಿ ಚತುರ್ ಎಂದೂ ಅವರು ಗುರುತಿಸಿದ್ದರು. 

ಮಾರ್ಚ್ನಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಕಲಬುರ್ಗಿಯವರ ಪತ್ನಿ ಉಮಾದೇವಿ ಅವರೂ ಮಿಸ್ಕಿನ್ ನನ್ನು ಗುರುತಿಸಿದ್ದರು. ಈ ಹಿಂದೆ ತನಿಖಾ ಹಂತದಲ್ಲಿ ನಡೆಸಲಾಗಿದ್ದ ಗುರುತು ಪತ್ತೆ ಪರೇಡ್ ನಲ್ಲಿಯೂ ಈ ಮೂವರು ಸಾಕ್ಷಿಗಳು ಮಿಸ್ಕಿನ್ ಮತ್ತು ಚತುರ್ ಅವರನ್ನು ದುಷ್ಕರ್ಮಿಗಳೆಂದು ಗುರುತಿಸಿದ್ದರು.

ಸನಾತನ ಸಂಸ್ಥಾ ಮತ್ತು ಅದರ ಸಂಯೋಜಿತ ಘಟಕ ಹಿಂದು ಜನಜಾಗೃತಿ ಸಮಿತಿಯಂತಹ ಗುಂಪುಗಳ ಮೂಲಭೂತವಾದಿ ಸದಸ್ಯರು ಹುಟ್ಟುಹಾಕಿದ್ದ ಬಲಪಂಥೀಯ ಉಗ್ರವಾದಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಮಿಸ್ಕಿನ್, 2017,ಸೆ.5ರಂದು ಬೆಂಗಳೂರಿನಲ್ಲಿ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ. ಚತುರ್ 2018ರಲ್ಲಿ ಬೆಳಗಾವಿಯಲ್ಲಿ ವಿವಾದಾತ್ಮಕ ಚಿತ್ರ ‘ಪದ್ಮಾವತ್’ಪ್ರದರ್ಶನದ ವೇಳೆ ಚಿತ್ರಮಂದಿರಗಳ ಮೇಲಿನ ದಾಳಿಗಳ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾನೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗಾಗಿ ಕರ್ನಾಟಕ ಪೊಲೀಸ್ ರಚಿಸಿದ್ದ ವಿಶೇಷ ತನಿಖಾ ತಂಡ (ಸಿಟ್)ವು ಮಿಸ್ಕಿನ್ ಮತ್ತು ಚತುರ್ ಅವರನ್ನು ಬಂಧಿಸಿತ್ತು. ಗೌರಿ ಹತ್ಯೆ ಪ್ರಕರಣವು ಕಲಬುರ್ಗಿ ಹಾಗೂ 2013, ಆಗಸ್ಟ್ ನಲ್ಲಿ ನಡೆದಿದ್ದ ನರೇಂದ್ರ ದಾಭೋಲ್ಕರ್ ಮತ್ತು 2015,ಫೆಬ್ರವರಿಯಲ್ಲಿ ನಡೆದಿದ್ದ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳೊಂದಿಗೆ ನಿಕಟ ನಂಟು ಹೊಂದಿದ್ದನ್ನು ತನಿಖೆಯು ಬಯಲಿಗೆಳೆದಿತ್ತು.

ಅಮೋಲ ಕಾಳೆ,ವಾಸುದೇವ ಸೂರ್ಯವಂಶಿ,ಶರದ ಕಲಾಸ್ಕರ್ ಮತ್ತು ಅಮಿತ್ ಬದ್ದಿ ಅವರು ಕಲಬುರ್ಗಿ ಹತ್ಯೆ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ. ಸಿಟ್ 2019, ಆಗಸ್ಟ್ ನಲ್ಲಿ ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ತನ್ನ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News