ಕೇಂದ್ರ ಸೇವೆಗೆ ಹೋಗಲು ಬಯಸದ ಹಿರಿಯ ಐಪಿಎಸ್ ಅಧಿಕಾರಿಗಳು !

Update: 2022-08-08 10:46 GMT

ಹೊಸದಿಲ್ಲಿ: ಆಲ್ ಇಂಡಿಯಾ ಸರ್ವಿಸ್ (AIS, ಎಐಎಸ್) ಅಧಿಕಾರಿಗಳ ಕೊರತೆ ಕೇಂದ್ರ ಸರಕಾರವನ್ನು ಬಾಧಿಸುತ್ತಿದ್ದು  ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳಂತೆ ಜುಲೈ 18ರಲ್ಲಿದ್ದಂತೆ ಕೇವಲ ಮೂವರು ಐಪಿಎಸ್(IPS) ಅಧಿಕಾರಿಗಳು ಕೇಂದ್ರೀಯ ಡೆಪ್ಯುಟೇಶನ್‍ಗೆ ಲಭ್ಯಗೊಳ್ಳಲು ಮುಂದೆ ಬಂದಿದ್ದಾರೆ.

ಆದರೆ ಈ ಮೂವರು ಅಧಿಕಾರಿಗಳು ಎಸ್‍ಪಿ ಶ್ರೇಣಿಯವರಾಗಿದ್ದು  ಡಿಜಿಪಿ, ಎಡಿಜಿಪಿ, ಐಜಿ ಮತ್ತು ಡಿಐಜಿ ಶ್ರೇಣಿಯ ಯಾವುದೇ ಅಧಿಕಾರಿ ಕೇಂದ್ರೀಯ ಡೆಪ್ಯುಟೇಶನ್(Deputation) ಮೇರೆಗೆ ನೇಮಕಗೊಳ್ಳಲು ಮುಂದೆ ಬಂದಿಲ್ಲ.

ಅಕ್ಟೋಬರ್ 2018ರಲ್ಲಿ 18 ಐಪಿಎಸ್ ಅಧಿಕಾರಿಗಳು ಕೇಂದ್ರೀಯ ಡೆಪ್ಯುಟೇಶನ್ ಮೇಲೆ ನೇಮಕಗೊಳ್ಳಲು ಮುಂದೆ ಬಂದಿದ್ದರು.

ಸಚಿವಾಲಯದ ಅಂಕಿಅಂಶಗಳಂತೆ ಐಪಿಎಸ್ ಅಧಿಕಾರಿಗಳ ಹುದ್ದೆಗೆ  ಸಿಬಿಐ, ಸಿಎಪಿಎಫ್, ಗುಪ್ತಚರ ಬ್ಯುರೋ ಸೇರಿದಂತೆ 17 ಕೇಂದ್ರೀಯ ಏಜನ್ಸಿಗಳಲ್ಲಿ 263 ಹುದ್ದೆಗಳು ಖಾಲಿಯಿದ್ದು ಇವುಗಳಲ್ಲಿ 94 ಡಿಐಜಿ ಶ್ರೇಣಿಯ ಹಾಗೂ 137 ಎಸ್‍ಪಿ ಶ್ರೇಣಿಯ ಹುದ್ದೆಗಳಾಗಿವೆ.

ನೀತಿ ತಿದ್ದುಪಡಿ:

ಫೆಬ್ರವರಿಯಲ್ಲಿ ಗೃಹ ಸಚಿವಾಲಯವು ಐಪಿಎಸ್ ಅವಧಿ ನೀತಿಗೆ ತಿದ್ದುಪಡಿ ತಂದಿದ್ದು ಇದರ ಪ್ರಕಾರ  ಡಿಐಜಿ ಹಂತದ ಅಧಿಕಾರಿಗಳೇ ಕಡ್ಡಾಯವಾಗಿ ಡಿಐಜಿಗಳಾಗಿ ಕೇಂದ್ರೀಯ ಡೆಪ್ಯುಟೇಶನ್ ಮೇರೆಗೆ ನಿಯೋಜನೆಗೊಳ್ಳಬೇಕೆಂದೇನಿಲ್ಲ, ಬದಲು ಕನಿಷ್ಠ 14 ವರ್ಷ ಸೇವಾನುಭವ ಇರುವ ಅಧಿಕಾರಿಗಳನ್ನು ಕೇಂದ್ರ ಡಿಐಜಿ ಶ್ರೇಣಿಯ ಹುದ್ದೆಗೆ ನೇಮಿಸಬಹುದಾಗಿದೆ.

ಆಗಸ್ಟ್ 4 ರಂದು ಸಿಪಿಐ(ಎಂ)ನ ವಿ ಶಿವದಾಸನ್ ಅವರಿಗೆ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದ ಸಿಬ್ಬಂದಿ ಖಾತೆ ಸಚಿವ ಜಿತೇಂದ್ರ ಸಿಂಗ್,  ಪ್ರಧಾನಿ ಕಾರ್ಯಾಲಯದಲ್ಲಿ 14 ಐಎಎಸ್ ಅಧಿಕಾರಿಗಳನ್ನು  ನಿಯೋಜಿಸಲಾಗಿದೆ, ಇವರಲ್ಲಿ ತಲಾ ಇಬ್ಬರು ಅಧಿಕಾರಿಗಳು ಗುಜರಾತ್, ಬಿಹಾರ ಕೇಡರ್‍ನವರಾಗಿದ್ದರೆ, ತಲಾ ಒಬ್ಬ ಅಧಿಕಾರಿ ಉತ್ತರಾಖಂಡ, ಸಿಕ್ಕಿಂ, ಮಣಿಪುರ, ಮಹಾರಾಷ್ಟ್ರ, ನಾಗಾಲ್ಯಾಂಡ್, ಛತ್ತೀಸಗಢ, ಮಧ್ಯಪ್ರದೇಶ, ಕರ್ನಾಟಕ ಮತ್ತು ಎಜಿಎಂಯುಟಿ ಕೇಡರ್‍ನವರಾಗಿದ್ದಾರೆ. ಕೇಂದ್ರ ಸರಕಾರ ಆಲ್ ಇಂಡಿಯಾ ಸರ್ವಿಸಸ್ ಅಧಿಕಾರಿಗಳ ಕೊರತೆಯನ್ನೂ ಎದುರಿಸುತ್ತಿದ್ದು ಈ ಸಮಸ್ಯೆಯನ್ನು ನೀಗಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ  ಡಿಸೆಂಬರ್ 2021ರಲ್ಲಿ  ರಾಜ್ಯ ಸರಕಾರಗಳ ಅನುಮತಿಯಿಲ್ಲದೆಯೇ ಐಎಎಸ್, ಐಪಿಎಸ್ ಮತ್ತು ಐಎಫ್‍ಎಸ್ ಅಧಿಕಾರಿಗಳನ್ನು ಕೇಂದ್ರೀಯ ಸೇವೆಗೆ ನಿಯೋಜಿಸುವ ಕುರಿತಂತೆ ಪ್ರಸ್ತಾಪಿಸಿದ್ದು ಅದು ಇನ್ನೂ ಪರಿಶೀಲನೆ ಹಂತದಲ್ಲಿದೆ.

ಒಬ್ಬ ಐಎಎಸ್ ಅಧಿಕಾರಿಯನ್ನು ಕೇಂದ್ರೀಯ ಡೆಪ್ಯುಟೇಶನ್‍ಗೆ ನಿಯೋಜಿಸುವ ಮೊದಲು ಆತ ಅಥವಾ ಆಕೆಯ ಅನುಮತಿ ಅಗತ್ಯವಾಗಿದೆ.

ಸಿಬ್ಬಂದಿ ಮತ್ತು ತರಬೇತಿ  ಇಲಾಖೆ ಸಂಸತ್ತಿಗೆ ನೀಡಿದ ಮಾಹಿತಿಯಂತೆ ಜನವರಿ 1 ರಲ್ಲಿದ್ದಂತೆ ವಿವಿಧ ರಾಜ್ಯಗಳಲ್ಲಿ 1472 ಐಎಎಸ್  ಹಾಗೂ 864 ಐಪಿಎಸ್ ಅಧಿಕಾರಿಗಳ ಹುದ್ದೆಗಳು ಖಾಲಿಯಿವೆ. ಒಟ್ಟು ಅನುಮೋದಿತ ಐಎಎಸ್ ಹುದ್ದೆಗಳ ಸಂಖ್ಯೆ 6700 ಹಾಗೂ ಐಪಿಎಸ್ ಹುದ್ದೆಗಳ ಸಂಖ್ಯೆ 4900 ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News