ರಾಜ್ಯ ಮಟ್ಟದಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನಿರಾಕರಿಸಿರುವುದಕ್ಕೆ ನಿಖರ ಉದಾಹರಣೆ ನೀಡಿ: ಸುಪ್ರೀಂ

Update: 2022-08-08 18:20 GMT

ಹೊಸದಿಲ್ಲಿ, ಆ. 8: ಆರು ಧಾರ್ಮಿಕ ಸಮುದಾಯಗಳ ರಾಷ್ಟ್ರೀಯ ಅಲ್ಪಸಂಖ್ಯಾತ ಸ್ಥಾನಮಾನ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ  ಸಂದರ್ಭ   ರಾಜ್ಯ ಮಟ್ಟದಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನಿರಾಕರಿಸಿದ ಕೆಲವು ನಿಖರ ಉದಾಹರಣೆಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಪಾರ್ಸಿಗಳು, ಸಿಕ್ಖರು ಹಾಗೂ ಜೈನರನ್ನು ಅಲ್ಪಸಂಖ್ಯಾತರು ಎಂದು ಘೋಷಿಸಿದ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಕಾಯ್ದೆ-1922ರ ಸೆಕ್ಷನ್ 2(ಸಿ)ಯನ್ನು ಪ್ರಶ್ನಿಸಿ ಹಿಂದೂ ಆಧ್ಯಾತ್ಮಿಕ ನಾಯಕ ದೇವಕಿನಂದನ ಠಾಕೂರ್ ಅವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಜಿಲ್ಲಾಮಟ್ಟದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸುವಂತೆ ಹಾಗೂ ರಾಜ್ಯ ಮಟ್ಟದಲ್ಲಿ ಸ್ಥಾನಮಾನ ನೀಡುವಂತೆ ಮನವಿ ಆಗ್ರಹಿಸಿದೆ. 

ಸಂಕ್ಷಿಪ್ತ ವಿಚಾರಣೆ ಸಂದರ್ಭ ನ್ಯಾಯಮೂರ್ತಿ ಯು.ಯು. ಲಲಿತ್, ಮಿಜೋರಾಂ ಅಥವಾ ಕಾಶ್ಮೀರದಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನಿರಾಕರಿಸಿದ ನಿಖರ ಪ್ರಕರಣಗಳು ಇದ್ದರೆ ಮಾತ್ರ ನಾವು ಈ ಬಗ್ಗೆ ಪರಿಶೀಲನೆ ನಡೆಸಬಹುದು. ಎಲ್ಲಾ ಕಡೆಯಲ್ಲೂ ಅಲ್ಪಸಂಖ್ಯಾತರು ಇದ್ದಾರೆ. ಕೆಲವು ರಾಜ್ಯಗಳಲ್ಲಿ ಕೆಲವು ಜನರು ಅಲ್ಪಸಂಖ್ಯಾತರಾಗಿದ್ದಾರೆ. ಇದನ್ನು ಮಾಡಬೇಕಾದುದು ನ್ಯಾಯಾಲಯವಲ್ಲ. ನೀವು ನಿಖರ ಉದಾಹರಣೆ ನೀಡಿದರೆ, ಅನಂತರ ನಾವು ಅದನ್ನು ಖಂಡಿತವಾಗಿ ಪರಿಶೀಲಿಸಬಹುದು ಎಂದರು.

ಒಂದು ವೇಳೆ ಕೆಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೆ, ನೀವು ನಮಗೆ ನಿರ್ದಿಷ್ಟ ಉದಾಹರಣೆ ನೀಡಬೇಕು. ನಾವು ಸುಮ್ಮನೇ ಘೋಷಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಲಲಿತ್ ಅವರು ಹೇಳಿದರು. 

ಈ ಸಂದರ್ಭ ನ್ಯಾಯವಾದಿ ಅಶ್ವನಿ ಉಪಾಧಾಯ, ಕೇಂದ್ರವು ಈಗಾಗಲೇ ಪ್ರತಿಕ್ರಿಯೆ ಸಲ್ಲಿಸಿರುವ ಮುಖ್ಯ ಪ್ರಕರಣದೊಂದಿಗೆ ಈ ಅರ್ಜಿಯನ್ನು ಸೇರಿಸಿ ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ನ್ಯಾಯಮೂರ್ತಿ ಭಟ್, ‘‘ನಾವು ಘೋಷಿಸಬೇಕು ಎಂದು ನೀವು ಏಕೆ ಬಯಸುತ್ತೀರಿ? ನಿಮ್ಮ ಪ್ರಾರ್ಥನೆ ಕಾನೂನಿನಲ್ಲಿ ಸಮರ್ಥನೀಯವಲ್ಲ’’ ಎಂದರು. 
ಈ ಅರ್ಜಿಯನ್ನು ಸೆಪ್ಟಂಬರ್ ಮೊದಲ ವಾರದಲ್ಲಿ ಆಲಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿತು. ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಕಾಯ್ದೆ 1992 ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗ ಕಾಯ್ದೆ 2004 ರ ನಿಯಮವನ್ನು ಪ್ರಶ್ನಿಸಿ ಅಶ್ವಿನಿ ಉಪಾದ್ಯಾಯ ಅವರು ಸಲ್ಲಿಸಿದ್ದ ಇದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀ ಕೋರ್ಟ್ ಈಗಾಗಲೇ ಪರಿಶೀಲನೆ ನಡೆಸುತ್ತಿದೆ. 

ಈ ಮನವಿಯಲ್ಲಿ ನಿರ್ದಿಷ್ಟ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News