ಗಾಝಾ ಸಂಘರ್ಷ: ವಿಶ್ವಸಂಸ್ಥೆ ಭದ್ರತಾ ಸಮಿತಿ ತುರ್ತು ಸಭೆ

Update: 2022-08-09 16:07 GMT

ವಿಶ್ವಸಂಸ್ಥೆ, ಆ.9: ಗಾಝಾದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಸಮಿತಿ ತುರ್ತು ಸಭೆ ನಡೆಸಿದ್ದು, ಇಸ್ರೇಲ್ ಸೇನೆ ಮತ್ತು ಪೆಲೆಸ್ತೀನ್ ಹೋರಾಟಗಾರರ ನಡುವಿನ ಘರ್ಷಣೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಏರ್ಪಟ್ಟಿರುವ ದುರ್ಬಲ ಕದನ ವಿರಾಮದ ಬಗ್ಗೆ ಹಲವು ಸದಸ್ಯರು ತೀವ್ರ ಕಳವಳ ಮತ್ತು ಆತಂಕ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಸಭೆಯ ಆರಂಭದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಮಧ್ಯಪ್ರಾಚ್ಯ ದೇಶಗಳಿಗೆ ವಿಶ್ವಸಂಸ್ಥೆಯ ಪ್ರತಿನಿಧಿ ಟಾರ್ ವೆನೆಸ್ಲ್ಯಾಂಡ್ ‘ ಕದನ ವಿರಾಮ ದುರ್ಬಲವಾಗಿದೆ. ಯಾವುದೇ ಯುದ್ಧದ ಪುನರಾರಂಭವು ಪೆಲೆಸ್ತೀನೀಯರು ಮತ್ತು ಇಸ್ರೇಲಿಯನ್ನರಿಗೆ ವಿನಾಶಕಾರಿ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಪ್ರಮುಖ ವಿಷಯಗಳ ಕುರಿತ ರಾಜಕೀಯ ಅಭಿವೃದ್ಧಿಗೆ ತೊಡಕಾಗಲಿದೆ’ ಎಂದು ಎಚ್ಚರಿಸಿದರು.

 ಗಾಝಾದಲ್ಲಿನ ಹಿಂಸಾಚಾರದ ಮೌಲ್ಯಮಾಪನವನ್ನು ವಿಶ್ವಸಂಸ್ಥೆ ನಡೆಸುತ್ತಿದ್ದು ಸಶಸ್ತ್ರ ಪೆಲೆಸ್ತೀನ್ ಗುಂಪುಗಳು ಹಾರಿಸಿದ ಸುಮಾರು 1,100 ಕ್ಷಿಪಣಿಗಳಲ್ಲಿ 20%ದಷ್ಟು ಗಾಝಾ ಪಟ್ಟಿಯೊಳಗೆ ಬಿದ್ದಿವೆ ಎಂದವರು ಮಾಹಿತಿ ನೀಡಿದರು. ಗಾಝಾದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಭದ್ರತಾ ಸಮಿತಿ ಕಳವಳಗೊಂಡಿದ್ದು ಅಲ್ಲಿನ ಸಂಘರ್ಷ ಪೂರ್ಣ ಪ್ರಮಾಣದ ಸೇನಾ ಸಂಷರ್ಘ ಮರುಕಳಿಸುವುದಕ್ಕೆ ಕಾರಣವಾಗಬಹುದು ಮತ್ತು ಗಾಝಾದಲ್ಲಿ ಈಗಾಗಲೇ ಭೀಕರವಾಗಿರುವ ಮಾನವೀಯ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ರಶ್ಯ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ ಹೇಳಿದರು.

ಗಾಝಾದಲ್ಲಿನ ಪರಿಸ್ಥಿತಿಗೆ ಇಸ್ಲಾಮಿಕ್ ಜಿಹಾದ್ ಪಡೆಯನ್ನು ಸಂಪೂರ್ಣ ಹೊಣೆಯನ್ನಾಗಿಸಬೇಕು ಎಂದು ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ಆಗ್ರಹಿಸಿದ್ದಾರೆ. ಸಭೆಗೂ ಮುನ್ನ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ‘ಸಭೆಯ ಏಕೈಕ ಫಲಿತಾಂಶವೆಂದರೆ ಇಸ್ಲಾಮಿಕ್ ಜಿಹಾದ್ ಗಳನ್ನು ಖಂಡಿಸುವುದು, ಅವರ ಅವಳಿ ಯುದ್ದಾಪರಾಧ(ಇಸ್ರೇಲ್ ಜನರನ್ನು ಗುರಿಯಾಗಿಸಿ ದಾಳಿ ಮತ್ತು ಮೂಲಭೂತವಾದಿ ಉಗ್ರವಾದಿಗಳ ಹೆಗಲ ಮೇಲೆ ಬಂದೂಕವಿರಿಸಿ ಅಮಾಯಕ ಪೆಲೆಸ್ತೀನೀಯರನ್ನು ಹತ್ಯೆ ಮಾಡಿರುವುದು)ಕ್ಕೆ ಹೊಣೆಯನ್ನಾಗಿಸುವುದು.

ಇಸ್ರೇಲ್ ನಾಗರಿಕರತ್ತ ರಾಕೆಟ್ ದಾಳಿ ನಡೆಸಿದ ಅವರು ಗಾಝಾ ನಿವಾಸಿಗಳನ್ನು ಮಾನವ ಗುರಾಣಿಯಾಗಿ ಬಳಸಿಕೊಂಡಿದ್ದಾರೆ ’ ಎಂದು ಹೇಳಿದರು. ಭಯೋತ್ಪಾದಕರ ಬೆದರಿಕೆಯ ವಿರುದ್ಧ ತನ್ನ ಜನರನ್ನು ರಕ್ಷಿಸುವ ಎಲ್ಲಾ ಹಕ್ಕು ಇಸ್ರೇಲ್ಗೆ ಇದೆ ಎಂದು ವಿಶ್ವಸಂಸ್ಥೆಗೆ ಅಮರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಸಭೆಯಲ್ಲಿ ಪ್ರತಿಪಾದಿಸಿದರು. ಕಳೆದ 11 ದಿನದಿಂದ ಗಾಝಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಕನಿಷ್ಟ 250 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

 ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ನಡೆದ ಕದನವಿರಾಮ ಒಪ್ಪಂದ ರವಿವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಆದರೆ ಕದನವಿರಾಮವನ್ನು ಉಲ್ಲಂಘಿಸಿದರೆ ಪ್ರತಿಕ್ರಿಯಿಸುವ ಹಕ್ಕನ್ನು ಎರಡೂ ಕಡೆಯವರು ಉಳಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News