ನಿವೃತ್ತಿ ಮುನ್ಸೂಚನೆ ನೀಡಿದ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌

Update: 2022-08-10 13:09 GMT
Photo: Twitter/FOS

ನ್ಯೂಯಾರ್ಕ್: ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ನಂತರ ನಿವೃತ್ತಿ ಘೋಷಿಸಬಹುದು. 40 ವರ್ಷದ ಸೆರೆನಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿವೃತ್ತಿಯನ್ನು ಸೂಚಿಸಿದ್ದಾರೆ. ಜೀವನದಲ್ಲಿ ಬೇರೆ ದಾರಿಯಲ್ಲಿ ಸಾಗಲು ನಿರ್ಧರಿಸಬೇಕಾದ ಸಮಯ ಬರುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ, ಅದನ್ನು ಯಾವಾಗ ಅಧಿಕೃತವಾಗಿ ಪ್ರಕಟಿಸುತ್ತಾರೆ ಎಂಬುದನ್ನು ಸೆರೆನಾ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಅವರ ಪೋಸ್ಟ್‌ನಿಂದ ಯುಎಸ್ ಓಪನ್ ನಂತರ ಅವರು ಟೆನಿಸ್‌ನಿಂದ ನಿವೃತ್ತರಾಗುತ್ತಾರೆ ಎಂಬ ಊಹಾಪೋಹಗಳಿವೆ.


ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಯುಎಸ್ ಓಪನ್ ನಂತರ ಸೆರೆನಾ ಟೆನಿಸ್‌ಗೆ ವಿದಾಯ ಹೇಳಲಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಟೊರೊಂಟೊ ಓಪನ್‌ನಲ್ಲಿ ಸೆರೆನಾ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಜೂನ್‌ನಿಂದ ಅವರು ತನ್ನ ಎರಡನೇ ಪಂದ್ಯವನ್ನಷ್ಟೇ ಆಡುತ್ತಿದ್ದರು. 23 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಸೆರೆನಾ ಟೆನಿಸ್‌ನಲ್ಲಿ ಹಲವು ದೊಡ್ಡ ದಾಖಲೆಗಳನ್ನು ಹೊಂದಿದ್ದಾರೆ.  

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಸೆರೆನಾ, "ಜೀವನದಲ್ಲಿ ನಾವು ಬೇರೆ ದಿಕ್ಕಿನಲ್ಲಿ ಚಲಿಸಲು ನಿರ್ಧರಿಸುವ ಸಮಯ ಬರುತ್ತದೆ. ನೀವು ಏನನ್ನಾದರೂ ತುಂಬಾ ಪ್ರೀತಿಸಿದಾಗ ಆ ಸಮಯಗಳು ಯಾವಾಗಲೂ ಕಠಿಣವಾಗಿರುತ್ತದೆ. ನಾನು ಟೆನಿಸ್ ಅನ್ನು ಪ್ರೀತಿಸುತ್ತೇನೆ. ಆದರೆ ಈಗ ಕೌಂಟ್‌ಡೌನ್ ಪ್ರಾರಂಭವಾಗಿದೆ. ನಾನು ತಾಯಿಯಾಗುವುದರ ಮೇಲೆ, ನನ್ನ ಆಧ್ಯಾತ್ಮಿಕ ಗುರಿಗಳ ಮೇಲೆ ಮತ್ತು ಅಂತಿಮವಾಗಿ ವಿಭಿನ್ನ ಆದರೆ ರೋಮಾಂಚನಕಾರಿ ಸೆರೆನಾಗಾಗಿ ಅನ್ವೇಷಣೆಯ ಮೇಲೆ ಗಮನಹರಿಸಬೇಕು. ಮುಂಬರುವ ಕೆಲವು ವಾರಗಳನ್ನು ನಾನು ಆನಂದಿಸಲಿದ್ದೇನೆ.” ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News