ಬಿಹಾರ: ಬಿಜೆಪಿ ಹೊಂದಿದ್ದ ಖಾತೆಗಳು ಆರ್‌ಜೆಡಿಗೆ

Update: 2022-08-11 01:52 GMT
ನಿತೀಶ್ ಕುಮಾರ್

ಪಾಟ್ನಾ: ಎಂಟನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಿತೀಶ್ ಕುಮಾರ್ ಅವರು ಈ ತಿಂಗಳ 24 ಮತ್ತು 25ರಂದು ನಡೆಯುವ ಅಧಿವೇಶಶದಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಬಿಜೆಪಿಯ ವಿಜಯ ಕುಮಾರ್ ಸಿನ್ಹಾ ಅವರ ಹುದ್ದೆಗೆ ಹೊಸ ಸ್ಪೀಕರ್ ಆಯ್ಕೆ ಬಳಿಕ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ ಎಂದು timesofindia.com ವರದಿ ಮಾಡಿದೆ.

ಆರ್‌ಜೆಡಿಯ ತೇಜಸ್ವಿ ಯಾದವ್ ಪಾಲ್ಗೊಂಡಿದ್ದ ಹೊಸ ಸಂಪುಟ ಸಭೆಯಲ್ಲಿ ಈ ತಿಂಗಳ 24 ಮತ್ತು 25ರಂದು ಅಧಿವೇಶನ ನಡೆಸಲು ನಿರ್ಧರಿಸಲಾಯಿತು. ತೇಜಸ್ವಿ ಯಾದವ್ ಅವರನ್ನು ಶೀಘ್ರವೇ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗುವುದು ಎಂದು ಜೆಡಿಯು ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

"ಮಹಾಮೈತ್ರಿಯ ಮೂರು ಪ್ರಮುಖ ಘಟಕ ಪಕ್ಷಗಳು ಸಚಿವರ ಮತ್ತು ಖಾತೆಗಳ ಸಂಖ್ಯೆಯನ್ನು ನಿರ್ಧರಿಸಿದ ಬಳಿಕ ಇತರ ಸಚಿವರು ಮುಂದಿನ ಕೆಲ ದಿನಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವರು" ಎಂದು ವಿವರಿಸಿದರು.

ಹೊಸ ಸರ್ಕಾರ ಹೆಚ್ಚಿನ ಅವಧಿಗೆ ಬಾಳದು ಎಂಬ ಬಿಜೆಪಿ ಊಹೆಯನ್ನು ತಳ್ಳಿಹಾಕಿದ ನಿತೀಶ್, 2015ರ ವಿಧಾನಸಭಾ ಚುನಾವಣೆಯಲ್ಲಿ ಇದ್ದ ಹಂತಕ್ಕೆ ಕುಸಿಯುವ ಭೀತಿ ಬಿಜೆಪಿಗೆ ಇದೆ ಎಂದು ಕುಟುಕಿದ್ದಾರೆ, 2015ರ ಚುನಾವಣೆಯಲ್ಲಿ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟದ ಕೈಯಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಸ್ಪರ್ಧಿಸಿದ್ದ 157 ಸ್ಥಾನಗಳ ಪೈಕಿ ಕೇವಲ 53ರಲ್ಲಿ ಜಯ ಸಾಧಿಸಿತ್ತು.

ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಜತೆ ಚರ್ಚೆ ನಡೆಸಿದ ನಿತೀಶ್, ಖಾತೆ ಹಂಚಿಕೆ ಬಗ್ಗೆ ಮಾತುಕತೆ ನಡೆಸಿದರು ಎನ್ನಲಾಗಿದೆ. ಗೃಹಖಾತೆಯನ್ನು ಸಿಎಂ ಸ್ವತಃ ಉಳಿಸಿಕೊಳ್ಳಳಿದ್ದು, ಕಳೆದ ಸರ್ಕಾರದಲ್ಲಿ ಬಿಜೆಪಿ ಹೊಂದಿದ್ದ ಬಹುತೇಕ ಎಲ್ಲ ಖಾತೆಗಳನ್ನು ಆರ್‌ಜೆಡಿಗೆ ಬಿಟ್ಟುಕೊಡಲಿದೆ ಎಂದು ಮೂಲಗಳು ಹೇಳಿವೆ.

ನಿತೀಶ್ ಪ್ರಮಾಣವಚನಕ್ಕೆ ಪಕ್ಷಕ್ಕೆ ಆಹ್ವಾನ ಇರಲಿಲ್ಲ ಎಂದು 77 ಶಾಸಕರನ್ನು ಹೊಂದಿರುವ ಎರಡನೇ ಅತಿದೊಡ್ಡ ಪಕ್ಷವಾದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News