ರಾಜೌರಿ: ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: ಇಬ್ಬರು ಭಯೋತ್ಪಾದಕರ ಗುಂಡಿಕ್ಕಿ ಹತ್ಯೆ, ಮೂವರು ಸೈನಿಕರು ಹುತಾತ್ಮ

Update: 2022-08-11 04:58 GMT
Photo:ANI

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಗುರುವಾರ ಮುಂಜಾನೆ ನಡೆದ ಶಂಕಿತ ಆತ್ಮಾಹುತಿ ದಾಳಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಇಬ್ಬರು ಯೋಧರೂ ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.

2018ರ ನಂತರ ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ನಡೆದ ಮೊದಲ ಭಯೋತ್ಪಾದಕ ದಾಳಿ ಇದಾಗಿದೆ.

ಭಯೋತ್ಪಾದಕರು ಶಿಬಿರದ ಬೇಲಿ ದಾಟಲು ಪ್ರಯತ್ನಿಸುತ್ತಿದ್ದಾಗ ಸೇನಾ ಸಿಬ್ಬಂದಿ ಅವರನ್ನು ಗುರುತಿಸಿ ಗುಂಡು ಹಾರಿಸಿದರು.  ಇದು ಗುಂಡಿನ ಚಕಮಕಿಗೆ ಕಾರಣವಾಯಿತು.

"ಯಾರೋ (ಭಯೋತ್ಪಾದಕರು) ಪರ್ಗಲ್‌ನಲ್ಲಿರುವ ಸೇನಾ ಶಿಬಿರದ ಬೇಲಿ ದಾಟಲು ಪ್ರಯತ್ನಿಸಿದರು. ಆಗ  ಗುಂಡಿನ ಚಕಮಕಿ ನಡೆಯಿತು" ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ಹೇಳಿದ್ದಾರೆ.

ರಾಜೌರಿ ಜಿಲ್ಲೆ ಮತ್ತು ಜಮ್ಮು ಪ್ರದೇಶದ ಇತರ ಭಾಗಗಳು ಹೆಚ್ಚಾಗಿ ಭಯೋತ್ಪಾದನೆಯಿಂದ ಮುಕ್ತವಾಗಿವೆ.  ಆದರೆ ಕಳೆದ ಆರು ತಿಂಗಳಿನಿಂದ ಜಮ್ಮುವಿನಲ್ಲಿ ಭಯೋತ್ಪಾದಕ-ಸಂಬಂಧಿತ ಘಟನೆಗಳ ಸರಣಿಗಳು ನಡೆದಿವೆ.

ಕೇಂದ್ರಾಡಳಿತ ಪ್ರದೇಶದ ಪುಲ್ವಾಮಾ ಜಿಲ್ಲೆಯಲ್ಲಿ ಪೊಲೀಸರು 25 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಳ್ಳುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.

2016 ರಲ್ಲಿ ಕೇಂದ್ರಾಡಳಿತ ಪ್ರದೇಶದ ಉರಿಯಲ್ಲಿ ಇದೇ ರೀತಿಯಲ್ಲಿ ನಡೆದ  ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 18 ಸೈನಿಕರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News