‘ಡಿಪಿ’ ಕಾಲದ ದೇಶಪ್ರೇಮದ ಪರಿ....

Update: 2022-08-11 05:43 GMT

ಭಾರತ ತನ್ನ ಸರ್ವತಂತ್ರ ಸ್ವಾತಂತ್ರ್ಯದ ಎಪ್ಪತ್ತೈದರ ಸಂಭ್ರಮದಲ್ಲಿದೆ. ಜಗತ್ತಿನ ಯಾವುದೇ ಒಂದು ಭೂಭಾಗಕ್ಕೂ ಇದೊಂದು ಅವಿಸ್ಮರಣೀಯವೇ ಸರಿ. ಭಾರತ ಕೇವಲ ಭೂಭಾಗದ ಒಂದು ತುಣುಕು ಮಾತ್ರವಲ್ಲ ಬದಲಾಗಿ ನಮ್ಮ ‘ಮಾತೃಭೂಮಿ’ ಎಂದೇ ಭಾವಿಸಿರುವವರು ನಾವು. ಇದರಲ್ಲಿ ಒಂದಿಷ್ಟು ಭಾವನಾತ್ಮಕತೆ ಬೆಸೆದ್ದಿದರೂ, ಇಂತಹ ಒಂದು ಮಾನಸಿಕತೆಯೊಂದಿಗೆಯೇ ಬೆಳೆದ ನಮಗೆ ದೇಶಪ್ರೇಮವೆನ್ನುವುದು ನಮ್ಮ ನಮ್ಮ ಮಾತೃಪ್ರೇಮದ ರೂಪದಲ್ಲಿ ಹುಟ್ಟಿನಿಂದಲೂ ಬಂದು ನಿಂತಿರುವ ಸಹಜ ಪ್ರಕ್ರಿಯೆ. ಇದಕ್ಕೆ ಕೆಲವೊಮ್ಮೆ ವರ್ಷ, ಆಚರಣೆ, ಚಿಹ್ನೆ, ಚಿತ್ರದ ಹಂಗಿಲ್ಲ ಮತ್ತು ಬೇಡ ಸಹ.

ಜಗತ್ತಿನಲ್ಲಿ ದೇಶಪ್ರೇಮದ ಮಾನದಂಡದ ಅಳತೆಯಲ್ಲಿ ನಾವು ಭಾರತೀಯರು ಪ್ರಥಮ ಸ್ಥಾನದಲ್ಲೇನು ಖಂಡಿತ ಇಲ್ಲ. ಜಪಾನಿಗರ ದೇಶ ಪ್ರೇಮ ...ಮತ್ತಿತರ ಕೆಲವು ಸಣ್ಣಪುಟ್ಟ ಎನ್ನಬಹುದಾದ ರಾಷ್ಟ್ರಗಳು ಸಹ ಈ ನಿಟ್ಟಿನಲ್ಲಿ ಬಹುಶಃ ನಮಗಿಂತ ಮಿಗಿಲಾಗಿರಬಹುದು ಮತ್ತು ಅದಕ್ಕೆ ಅದರದ್ದೇ ಆದ ಕಾರಣ, ಸೌಕರ್ಯ ಹಾಗೂ ಅನಿವಾರ್ಯತೆಗಳು ಸಹ ಇದೆ. ಅಷ್ಟಕ್ಕೂ ಸಹಜತೆಯಲ್ಲೇ ಇರಲೇಬೇಕಾದ ಈ ದೇಶ ಪ್ರೇಮಕ್ಕೆ, ಮಾನದಂಡ ಎಂಬ ಅಳತೆಗೋಲೇ ಒಂದು ಹಾಸ್ಯಾಸ್ಪದ ಮತ್ತು ಅನಗತ್ಯ ವಿದ್ಯಮಾನ. ಇದಕ್ಕೇನಾದರೂ ರಾಜಕೀಯ ಪಕ್ಷಗಳ ಅಥವಾ ಆಡಳಿತಾರೂಢ ವ್ಯವಸ್ಥೆಯ ರೂಪ ಮತ್ತು ಬಣ್ಣ ತಗಲಿದರಂತೂ ಪ್ರಸ್ತುತ ಗಂಟೆಗೊಮ್ಮೆ ಡಿಪಿ ಚೇಂಜ್ ಮಾಡಿ ನಿಲುವು ಬದಲಾಯಿಸುವ ಸ್ವಾರ್ಥ ಮನುಷ್ಯರೆದುರು ಪರಿಸ್ಥಿತಿ ಹದಗೆಟ್ಟು ದೇಶ ಪ್ರೇಮ ಮಾರುಕಟ್ಟೆಯ ಸರಕಾಗುವ ಸಾಧ್ಯತೆ ಇದೆ.

ಭಾರತೀಯರ ದೇಶ ಪ್ರೇಮ ಸ್ವಾತಂತ್ರ್ಯಪೂರ್ವ ಮತ್ತು ನಂತರದ ದಿನಗಳಲ್ಲಿ ಒಂದಿಷ್ಟು ಬದಲಾವಣೆಯ ಹಂತಕ್ಕೆ ಬಂದಿದೆ ಎಂಬುದು ನಿಜ. ಬ್ರಿಟಿಷರನ್ನು ಒದ್ದೋಡಿಸಬೇಕೆಂಬ ಮೂಲ ತತ್ವದ ದೇಶಪ್ರೇಮ ಕಾಲಕ್ರಮೇಣ ದೇಶದ ಭವಿಷ್ಯ ಭದ್ರತೆ ಮತ್ತು ಸ್ವಹಿತದ ರೂಪಕ್ಕೆ ಬಂದು ನಿಂತಿದ್ದು ಕಾಲದ ಅನಿವಾರ್ಯತೆ. ಈ ಬದಲಾದ ದೇಶ ಪ್ರೇಮ ಯಾವುದೇ ಸಾಮಾಜಿಕ ರಾಜಕೀಯ ಸ್ಥಿತ್ಯಂತರಗಳ ನಡುವೆಯೂ ಯಾವುದೇ ನಿಶಾನಿಯನ್ನು ಬೇಡದೆ ಸುಪ್ತವಾಗಿ ನಮ್ಮಿಳಗೆ ಭದ್ರವಾಗಿತ್ತು, ಆದರೆ ಈಗ ಕಾಲ ಮತ್ತೆ ಬದಲಾಗಿದೆ. ದೇಶಪ್ರೇಮವನ್ನು Act ಮೂಲಕ ತೋರಿಸಬೇಕಾದ ರಾಜಕೀಯ ಕಾರಣ ನಮ್ಮೆದುರಿಗಿದೆ. ಒಂದೆಡೆ ರಾಷ್ಟ್ರ ಪ್ರೇಮದ ಅಥವಾ ದೇಶ ಸಾಂಕೇತಿಸುವ ವಿಚಾರಗಳಿಗೆ ತಲೆಬಾಗದ ಬೆರಳೆಣಿಕೆಯಷ್ಟು ಮಂದಿಯ ನಡುವೆ, ನೈಜ ದೇಶಪ್ರೇಮಿಗಳು ಇಂತಹ ಕಪಟ ನಾಟಕಕ್ಕೆ ಶರಣಾಗಬೇಕಾಗಿಬಂದಿರುವುದು ಭಾರತ ತನ್ನ ಅಮೃತೋತ್ಸವ ಆಚರಿಸುವ ಈ ಸುಂದರ ಗಳಿಗೆಯಲ್ಲಿ ದೇಶದ ದುರಂತವೇ ಸರಿ.

ರಾಜಕೀಯ ವ್ಯವಸ್ಥೆ ಆಧಾರಿತ ಭ್ರಷ್ಟಾಚಾರ ಇನ್ನೂ ನಿಲ್ಲದ ಯಾವುದೇ ಆಡಳಿತ ವ್ಯವಸ್ಥೆ, ವ್ಯಕ್ತಿಯ ಟೀಕೆ ಭಿನ್ನಾಭಿಪ್ರಾಯ ... ದೇಶ ಪ್ರೇಮದ ವಿರೋಧ ಎಂಬ ತತ್ವ ಜನರಲ್ಲಿ ರೂಪಿಸಹೊರಟದ್ದೇ ಈ ಎಲ್ಲಾ ತೋರ್ಪಡಿಕೆಯ ದೇಶಪ್ರೇಮದ ಹುಟ್ಟಿಗೆ ಮೂಲಕಾರಣ. ಮತೀಯ ಭಿನ್ನತೆ, ಜಾತಿ ವ್ಯವಸ್ಥೆಯ ತೊಡಕು, ಜೀವನ ಮಟ್ಟದ ಸಾಮಾಜಿಕ ಅಂತರವಂತೂ ದೇಶಪ್ರೇಮವನ್ನು ಮಾನವನೊಳಗೆ ವಿಭಿನ್ನವಾಗಿ ಅಳೆಯುವಂತೆ ಮಾಡಿದೆ, ಆತ ಉಪಯೋಗಿಸಬಹುದಾದ ಧ್ವಜದ ಗಾತ್ರದಂತೆ. ಇದೊಂದು ಭಾರೀ ಕಳವಳ ಮತ್ತು ಆತಂಕಕಾರಿ ವಿಷಯ. ಡಿಪಿಯೊಳಗೆ ತಿರಂಗ ಕಂಡು ಮನದೊಳಗೆ ವಿತಂಡವಿದ್ದರೆ ಅದು ದೇಶಕ್ಕೆ ಮಾತ್ರವಲ್ಲ ಮನುಕುಲಕ್ಕೆ ಅಪಾಯ. ಹಾಗಾಗಿ ನಾವೆಲ್ಲರೂ ಮೊದಲು ರಾಜಕೀಯದ ವಾಸನೆ ಇಲ್ಲದ ನೈಜ ದೇಶಪ್ರೇಮಿಗಳಾಗೋಣ...ಮನದ ಮುದ್ರೆಯ ಡಿಪಿ ಎಂದಿಗೂ ಬದಲಾಯಿಸದೆ ದೇಶ ನಿಷ್ಠರಾಗಿ ಮತ್ತು ಅಗತ್ಯ ಬಿದ್ದರೆ ಆ ನಿಷ್ಠತೆ ದೇಶದ ಸರ್ವ ರೀತಿಯ ಅಸಮರ್ಪಕತೆಯನ್ನು ಧೈರ್ಯದಿಂದ ಪ್ರಶ್ನಿಸುತ್ತ ತಿರಂಗದೆದುರು ಎದೆಸೆಟೆದು ನಿಂತು.

Writer - ಕಲ್ಲಚ್ಚು ಮಹೇಶ ಆರ್. ನಾಯಕ್

contributor

Editor - ಕಲ್ಲಚ್ಚು ಮಹೇಶ ಆರ್. ನಾಯಕ್

contributor

Similar News