ಗೋಕಳ್ಳಸಾಗಣಿಕೆ ಪ್ರಕರಣ: ಟಿಎಂಸಿ ನಾಯಕ, ಮಮತಾ ಬ್ಯಾನರ್ಜಿ ಸಮೀಪವರ್ತಿ ಸಿಬಿಐ ವಶಕ್ಕೆ

Update: 2022-08-11 08:28 GMT

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮೀಪವರ್ತಿಯೆಂದೇ ತಿಳಿಯಲಾಗಿರುವ ಅನುಬ್ರತ ಮೊಂಡಾಲ್ ಅವರನ್ನು ಗಡಿಯಾಚೆಗೆ ಗೋ ಕಳ್ಳಸಾಗಣಿಕೆ ಪ್ರಕರಣದಲ್ಲಿ ಇಂದು ಸಿಬಿಐ ಬಂಧಿಸಿದೆ. ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಕಳೆದ ವಾರ ನೀಡಿದ್ದ ಎರಡು ಸಮನ್ಸ್ ಸೇರಿದಂತೆ ಈ ಹಿಂದೆ ಹಲವು ಸಮನ್ಸ್ ಅನ್ನು ಮೊಂಡಾಲ್ ತಪ್ಪಿಸಿಕೊಂಡ ನಂತರ ಇದೀಗ ಅವರನ್ನು ಸಿಬಿಐ ಇಂದು ತನ್ನ ವಶಕ್ಕೆ ಪಡೆದುಕೊಂಡಿದೆ.

ಟಿಎಂಸಿ ಯ ಬಿರ್ಭುಂ ಘಟಕದ ಅಧ್ಯಕ್ಷರಾಗಿರುವ ಮೊಂಡಾಲ್ ಅವರನ್ನು ಬೋಲ್‍ಪುರ್‍ನಲ್ಲಿರುವ ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಸಿಬಿಐ ಅಧಿಕಾರಿಗಳ ಜೊತೆಗೆ ಹಲವಾರು ಸಿಆರ್‍ಪಿಎಫ್ ಸಿಬ್ಬಂದಿಗಳೂ ಆಗಮಿಸಿದ್ದರು.  

ಈ ಹಿಂದೆ ಆಗಸ್ಟ್ 8 ಹಾಗೂ 10 ರಂದು ಅವರಿಗೆ ಸಿಬಿಐ ಸಮನ್ಸ್ ನೀಡಲಾಗಿತ್ತು.  ಇದನ್ನು ತಪ್ಪಿಸಲು ಮೊಂಡಾಲ್ ಅವರು ಆಗಸ್ಟ್ 8ರಂದು ಕೊಲ್ಕತ್ತಾದ ಎಸ್‍ಎಸ್‍ಕೆಎಂ ಆಸ್ಪತ್ರೆಗೆ ದಾಖಲಾಗಲು ಯತ್ನಿಸಿದರೂ ಅವರಿಗೆ ದಾಖಲಾಗುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದರು.

ಇದೀಗ ಮೊಂಡಾಲ್ ಅವರು ಬಂಧಿತರಾಗಿರುವುದು ಭಾರತ-ಬಾಂಗ್ಲಾದೇಶ ಗಡಿ ಮೂಲಕ ಗೋಕಳ್ಳಸಾಗಣಿಕೆ ಪ್ರಕರಣದಲ್ಲಿ ಬಿರ್ಭುಂನ ಗೋ ಮಾರುಕಟ್ಟೆಗಳಿಂದ ದನಗಳನ್ನು ಸಾಗಿಸಲಾಗುತ್ತಿತ್ತು ಎಂಬ ಆರೋಪದ ಮೇಲೆ ಸಿಬಿಐ ದಾಖಲಿಸಿರುವ ಎಫ್‍ಐಆರ್ ಪ್ರಕಾರ  ಗಡಿಯಾಚೆಗೆ ಕಳ್ಳಸಾಗಣಿಕೆಗೆ ಒಳಗಾಗಲಿದ್ದ 20,000ಕ್ಕೂ ಅಧಿಕ ದನಗಳನ್ನು ಬಿಎಸ್‍ಎಫ್ ಡಿಸೆಂಬರ್ 2015 ಹಾಗೂ ಎಪ್ರಿಲ್ 2017ರ ನಡುವೆ ಸತೀಶ್ ಕುಮಾರ್ ಅವರು ಮಾಲ್ಡಾ ಜಿಲ್ಲೆಯಲ್ಲಿ ಬಿಎಸ್‍ಎಫ್ 36 ಬೆಟಾಲಿಯನ್ ಕಮಾಂಡೆಂಟ್ ಆಗಿರುವ ವೇಲೆ ವಶಪಡಿಸಿಕೊಳ್ಳಲಾಗಿತ್ತು. ಈಗ ಸೇವೆಯಲ್ಲಿಲ್ಲದ ಸತೀಶ್ ಕೂಡ ಈ ಪ್ರಕರಣದ ಆರೋಪಿಗಳಲ್ಲೊಬ್ಬರು.

ಸಿಬಿಐ ಚಾರ್ಜ್ ಶೀಟ್‍ನಲ್ಲಿ ಮೊಂಡಾಲ್ ಅವರ ಭದ್ರತಾ ಅಧಿಕಾರಿ ಸೈಗಲ್ ಹುಸೈನ್ ಅವರನ್ನು ಆರೋಪಿಯೆಂದು ಹೆಸರಿಸಲಾಗಿದ್ದು ಆವರನ್ನು ಈಗಾಗಲೇ ಬಂಧಿಸಲಾಗಿದೆ.  ಮಾಜಿ ಬಿಎಸ್‍ಎಫ್ ಕಮಾಂಡೆಂಟ್ ಸತೀಶ್ ಕುಮಾರ್, ಮಾಜಿ ತೃಣಮೂಲ ನಾಯಕ ಬಿನ್ಯಾ ಮಿಶ್ರಾ ಹಾಗೂ ಬಿರ್ಭುಂ ಇಲ್ಲಿನ ದನಗಳ ಆಶ್ರಯ ತಾಣ ಮಾಲೀಕ ಅಬ್ದುಲ್ ಲತೀಫ್ ಅವರ ಹೆಸರುಗಳು ಸಿಬಿಐ ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News