ಉಡುಪಿಯಲ್ಲಿ ಎಂಐಓ ಕ್ಯಾನ್ಸರ್ ಡೇ ಕೇರ್ ಸೆಂಟರ್ ಪ್ರಾರಂಭ

Update: 2022-08-11 17:03 GMT
ಸಾಂದರ್ಭಿಕ ಚಿತ್ರ

ಉಡುಪಿ, ಆ.11: ಮಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಬಡವರು ಸೇರಿದಂತೆ ಎಲ್ಲಾ ರೀತಿಯ ಕ್ಯಾನ್ಸರ್  ರೋಗಿಗಳಿಗೆ ಚಿಕಿತ್ಸೆ ನೀಡಿ ಜಪ್ರಿಯಗೊಂಡಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಕ್ಯಾನ್ಸರ್ ಡೇ ಕೇರ್ ಸೆಂಟರ್ ಉಡುಪಿಯಲ್ಲಿ ಕಾರ್ಯಾರಂಭ ಮಾಡಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಸುರೇಶ್ ರಾವ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಕ್ಯಾನ್ಸರ್ ರೋಗಿಗಳಿಗೆ ಮಾತ್ರ ಮೀಸಲಾದ ಈ ಆಸ್ಪತ್ರೆ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ರೋಗಿಗಳಿಗೆ ಅನುಕೂಲ ವಾಗಲಿದೆ. ಎಂಐಓ ಮಂಗಳೂರು ಕೇಂದ್ರದ ಎಲ್ಲಾ ಸೇವೆಗಳು ಇಲ್ಲೂ ಲಭ್ಯವಿರಲಿದೆ. ಅಲ್ಲಿನ ಹಿರಿಯ ಕ್ಯಾನ್ಸರ್ ತಜ್ಞವೈದ್ಯರು ರೋಗಿಗಳ ಸಂದರ್ಶನಕ್ಕೆ ಪ್ರತಿದಿನ ಇಲ್ಲೂ ಲಭ್ಯರಿರುವರು. ಅಲ್ಲದೇ ರೋಗಿಯ ಕುಟುಂಬದವರು ಇಲ್ಲಿಯೇ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಬಹುದು ಎಂದರು.

20 ಹಾಸಿಗೆಯುಳ್ಳ ಸುಸಜ್ಜಿತ ಡೇ ಕೇರ್ ಸೆಂಟರ್ ಇದಾಗಿದ್ದು, ಇಲ್ಲಿ ಸುಸಜ್ಜಿತ ಪ್ರಯೋಗಾಲಯ, ನುರಿತ ಶುಶ್ರೂಷಕರು, ಸಿಬ್ಬಂದಿ ವರ್ಗವಿದ್ದು, ಅಕ್ಕರೆಯ ಆರೈಕೆಯೊಂದಿಗೆ ಆಧುನಿಕ ಚಿಕಿತ್ಸಾ ಸೌಲಭ್ಯ ಲಭ್ಯವಿದೆ. ಎಂಐಓ ಉಡುಪಿ ಡೇ ಕೇರ್‌ನಲ್ಲಿ ಪ್ರಮುಖ ಕ್ಯಾನ್ಸರ್ ಚಿಕಿತ್ಸೆಗಳಾದ ಕೀಮೋಥೆರಪಿ, ಇಮ್ಯೂನೋಥೆರಪಿ, ಟಾರ್ಗೆಟೆಡ್ ಥೆರಪಿ ಸೇರಿದಂತೆ ಶೇ.೮೫ರಷ್ಟು ಚಿಕಿತ್ಸೆಗಳನ್ನು  ಒಳರೋಗಿಯಾಗಿ ದಾಖಲಾಗದೇ ಡೇ ಕೇರ್‌ನಲ್ಲಿ ಪಡೆಯಬಹುದು ಎಂದರು.

ಬಡ ಕುಟುಂಬದ ಕ್ಯಾನ್ಸರ್ ರೋಗಿಗಳು ಇಲ್ಲೂ ಸರಕಾರದ ಯೋಜನೆಗಳಡಿ ಉಚಿತ ಅಥವಾ ಅತೀ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು. ಮಂಗಳೂರು ಕೇಂದ್ರದಲ್ಲಿ ಶೇ.70ರಷ್ಟು ಬಿಪಿಎಲ್ ಕುಟುಂಬದ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಎಲ್ಲಾ ಬಗೆಯ ಕಾರ್ಪೋರೇಟ್ ಹಾಗೂ ಖಾಸಗಿ ಆರೋಗ್ಯ ವಿಮೆಗಳಡಿ ಚಿಕಿತ್ಸೆ ಪಡೆಯುವ ಅನುಕೂಲ ಕಲ್ಪಿಸಲಾಗಿದೆ. ಹೀಗಾಗಿ ಸಾಮಾನ್ಯ ಜನರೂ ಕೈಗೆಟಕುವ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ ಎಂದರು.

ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಬ್ಯುಸಿನೆಸ್ ಬೇ ಸೆಂಟರ್‌ನಲ್ಲಿ ಎಂಐಓ ಕ್ಯಾನ್ಸರ್ ಡೇಕೇರ್ ಸೆಂಟರ್ ಕಾರ್ಯಾಚರಿಸುತ್ತಿದೆ. ಕ್ಯಾನ್ಸರ್ ಮನುಷ್ಯ ದೇಹದ ಯಾವುದೇ ಅಂಗಗಳಿಗೂ ಬರಬಹುದಾದ ಕಾಯಿಲೆ. ವಿಶ್ವದಲ್ಲಿ ಅದಕ್ಕೆ ಮೂರನೇ ಸ್ಥಾನವಿದೆ. ಪ್ರತಿ ವರ್ಷ ೮ ಲಕ್ಷ ಮಂದಿ ಕ್ಯಾನ್ಸರ್‌ನಿಂದ ಸಾಯುತಿದ್ದಾರೆ. ವಂಶಪಾರಂಪರ್ಯದಿಂದ ಅಥವಾ ಇಂದಿನ ಜೀವನ ಕ್ರಮದಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದವರು ವಿವರಿಸಿದರು.

ಮೊದಲೆಲ್ಲಾ ಹೆಚ್ಚಾಗಿ ವೃದ್ಧರಲ್ಲಿ ಕಾಣಿಸಿಕೊಳ್ಳುತಿದ್ದ ಕ್ಯಾನ್ಸರ್ ಇಂದು 30-40ರ ವಯೋಮಾನದವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಪುರುಷ ರಲ್ಲಿ ಬಾಯಿ, ವಸಡು, ನಾಲಗೆ, ಶ್ವಾಸಕೋಶ, ಅನ್ನನಾಳದ ಕ್ಯಾನ್ಸರ್ ಸಾಮಾನ್ಯವಾದರೆ, ಮಹಿಳೆಯರಲ್ಲಿ ಸ್ತನ, ಗರ್ಭಕೋಶ ಹಾಗೂ ಥೈರಾಯ್ಡ್ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಪ್ರಾರಂಭಿಕ ಹಂತದಲ್ಲಿ ರೋಗವನ್ನು ಪತ್ತೆ ಹಚ್ಚಿದರೆ, ಸುಲಭದಲ್ಲಿ ಗುಣಪಡಿಸಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News