ಕ್ರಿಮಿಯಾ ವಾಯುನೆಲೆಯಲ್ಲಿ ಸ್ಫೋಟ: ರಶ್ಯದ 7 ಯುದ್ಧ ವಿಮಾನ ನಾಶ

Update: 2022-08-11 17:53 GMT
ಸಾಂದರ್ಭಿಕ ಚಿತ್ರ 

ಮಾಸ್ಕೊ, ಆ.11: ಉಕ್ರೇನ್ನಿಂದ ರಶ್ಯ ಸ್ವಾಧೀನಪಡಿಸಿಕೊಂಡಿರುವ ಕ್ರಿಮಿಯಾ ಪರ್ಯಾಯ ದ್ವೀಪದಲ್ಲಿರುವ ವಾಯುನೆಲೆಯಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ರಶ್ಯದ 7 ಯುದ್ಧವಿಮಾನಗಳು ನಾಶಗೊಂಡಿವೆ ಎಂದು ಉಪಗ್ರಹ ರವಾನಿಸಿದ ಚಿತ್ರಗಳ ಸಹಿತ ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

 ‌
ಮಂಗಳವಾರ ಸಾಕಿ ವಾಯುನೆಲೆಯಲ್ಲಿ ಸಂಭವಿಸಿದ್ದ ಸರಣಿ ಸ್ಫೋಟದಲ್ಲಿ ಕನಿಷ್ಟ 7 ಯುದ್ಧವಿಮಾನ ನಾಶಗೊಂಡಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಇವು ಎಸ್ಯು-24 ಬಾಂಬರ್ ಮತ್ತು ಎಸ್ಯು-30 ಯುದ್ಧವಿಮಾನದಂತೆ ಕಾಣಿಸುತ್ತದೆ. ವಾಯುನೆಲೆಯ ಸುತ್ತಮುತ್ತಲಿನ ಸಸ್ಯಗಳಿಗೂ ಹಾನಿಯಾಗಿದ್ದು ಅಮೆರಿಕದ ಪ್ಲಾನೆಟ್ ಲ್ಯಾಬ್ಸ್ ಉಪಗ್ರಹ ಚಿತ್ರಗಳನ್ನು ಬಿಡುಗಡೆಗೊಳಿಸಿದೆ ಎಂದು ಸಿಎನ್ಎನ್ ಸುದ್ಧಿಸಂಸ್ಥೆ ವರದಿ ಮಾಡಿದೆ.
 
ಸಂಗ್ರಹಿಸಿಟ್ಟಿದ್ದ ಮದ್ದುಗುಂಡುಗಳಿಗೆ ಕಿಡಿ ತಗುಲಿ ಸ್ಫೋಟ ಸಂಭವಿಸಿದೆ, ಯಾವುದೇ ದಾಳಿ ನಡೆದಿಲ್ಲ ಎಂದು ರಶ್ಯದ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಸ್ಫೋಟದ ಬಗ್ಗೆ ಮತ್ತು ಇದರಿಂದ ವಾಯುನೆಲೆಯ ರನ್ವೇ ಮೇಲೆ ಆಗಿರುವ ಹಾನಿಯ ಬಗ್ಗೆ ಬಿಬಿಸಿ ಕೂಡಾ ವರದಿ ಮಾಡಿದೆ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ದಾಸ್ತಾನು ಕೊಠಡಿಯಂತೆ ಕಾಣುವ 3 ಕಟ್ಟಡಗಳಿಗೂ ಹಾನಿಯಾಗಿದ್ದು ಇದು ಉದ್ದೇಶಿತ ದಾಳಿಯಾಗಿರುವ ಸಾಧ್ಯತೆಯಿದೆ ಎಂದು ರಕ್ಷಣಾ ವಿಷಯಕ್ಕೆ ಸಂಬಂಧಿಸಿದ ತಜ್ಞ ವಿಲಿಯಂ ಆಲ್ಬರ್ಕ್ ವಿಶ್ಲೇಷಿಸಿದ್ದಾರೆ. 

ಆದರೆ ಉಕ್ರೇನ್ ದಾಳಿಯ ಹೊಣೆ ವಹಿಸಿಕೊಂಡಿಲ್ಲ. ವಾಯುನೆಲೆಯು ರಶ್ಯನ್ ಮುಂಚೂಣಿಯಿಂದ 225 ಕಿ.ಮೀ ಹಿಂದೆ, ಸಮುದ್ರಬದಿಯ ಪ್ರವಾಸೀ ತಾಣ ನೊವೊಫೆಡೊರ್ವಿಕಾದ ಸಮೀಪವಿದೆ. ಸ್ಫೋಟದಿಂದ ಪ್ರವಾಸಿಗರ ಮೇಲೆ ಯಾವುದೇ ಪರಿಣಾಮ ಆಗಿಲ್ಲ ಎಂದು ರಶ್ಯದ ಪ್ರವಾಸ ನಿರ್ವಾಹಕರ ಸಂಸ್ಥೆ ಹೇಳಿದೆ. ಸ್ಫೋಟ ನಡೆದಿರುವುದನ್ನು ರಶ್ಯದ ರಕ್ಷಣಾ ಸಚಿವಾಲಯವೂ ದೃಢಪಡಿಸಿದೆ.
 ---------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News