ನಕಲಿ ನೋಟು ಚಲಾವಣೆ ಪ್ರಕರಣ: ಬಿಜೆಪಿ ಮಾಜಿ ಶಾಸಕನ ಪತ್ನಿಗೆ 4 ವರ್ಷ ಕಾರಾಗೃಹ ಶಿಕ್ಷೆ

Update: 2022-08-11 18:19 GMT

ಚಾಯ್‌ಬಾಸಾ, ಆ. 11: ನಕಲಿ ನೋಟು ಚಲಾವಣೆ ಮಾಡಿದ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕ ಪುಟಕರ್ ಹೆಂಬ್ರೋಮ್ ಅವರ ಪತ್ನಿ ಮಲಾಯಾ ಹೆಂಬ್ರೋಮ್‌ಗೆ  ಜಾರ್ಖಂಡ್‌ನ ಪಶ್ಚಿಮ ಸಿಂಘ್‌ಭೂಮ್ ಜಿಲ್ಲೆಯ ನ್ಯಾಯಾಲಯ 4 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. 

ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸೂರ್ಯಭೂಷಣ್ ಓಝಾ ಅವರು  ಮಲಾಯಾ ಹೆಂಬ್ರೋಮ್  ಅವರಿಗೆ ಬುಧವಾರ 4 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ  5 ಸಾವಿರ ರೂ. ದಂಡ ವಿಧಿಸಿದರು.

ಪುಟಕರ್ ಹೆಂಬ್ರೋಮ್ ಅವರು ಚಾಯ್‌ಬಾಸದ ಮಾಜಿ ಶಾಸಕ. ಅವರ ಎರಡನೇ ಪತ್ನಿ ಮಲಾಯಾ. ಮಟ್ಕಮ್ಹಟು ಗ್ರಾಮದ ನಿವಾಸಿ ಜಯಂತಿ ದೇವಗಂ ಎಂಬವರು ಮಲಾಯಾ ವಿರುದ್ಧ ಮುಫಸಿಲ್ ಪೊಲೀಸ್ ಠಾಣೆಯಲ್ಲಿ 2020 ಸೆಪ್ಟಂಬರ್‌ನಲ್ಲಿ ಪ್ರಕರಣ ದಾಖಲಿಸಿದ್ದರು. 

ಜಯಂತಿ ದೇವಗಂ ತನ್ನ ದೂರಿನಲ್ಲಿ ಮಲಾಯಾ ಅವರು ತನ್ನ ಅಂಗಡಿಯಿಂದ 1,600 ರೂಪಾಯಿಯ ವಸ್ತುಗಳನ್ನು ಖರೀದಿಸಿದ್ದರು ಹಾಗೂ 2,000 ನೋಟನ್ನು ನೀಡಿದ್ದರು. ತಾನು ಅದನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಠೇವಣಿ ಇರಿಸುವ ಸಂದರ್ಭ ಅವರ ಸ್ವೀಕರಿಸಲಿಲ್ಲ ಎಂದು ಆರೋಪಿಸಿದ್ದರು. ಮರುದಿನ ತಾನು ಆ ನೋಟನ್ನು ಸ್ಥಳೀಯ ಅಂಗಡಿಗೆ ನೀಡಿದ್ದೆ. ಆದರೆ, ಅವರು ಕೂಡ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಮಲಯಾ ಅವರಿಗೆ ತಿಳಿಸಿದಾಗ, ಅವರು ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆಪಾದಿಸಿದ್ದರು.

ಘಟನೆ ನಡೆಯುವ ಸಂದರ್ಭ ಅದೇ ಪ್ರದೇಶದಲ್ಲಿ ಹಾದು ಹೋಗುತ್ತಿದ್ದ ಪೊಲೀಸ್ ಗಸ್ತು ತಂಡ ಮಲಾಯಾ ಅವರನ್ನು ಬಂಧಿಸಿತ್ತು ಹಾಗೂ ನಕಲಿ ನೋಟನ್ನು ವಶಕ್ಕೆ ತೆಗೆದುಕೊಂಡಿತ್ತು. ವಿಚಾರಣೆ ಸಂದರ್ಭ ಮಲಯಾ ಅವರು, ತಾನು ದಿಲ್ಲಿಯಿಂದ 500 ರೂಪಾಯಿ ನೀಡಿ ಈ ನಕಲಿ ನೋಟನ್ನು ಪಡೆದಿದ್ದು, ಇಲ್ಲಿ ಚಲಾವಣೆ ಮಾಡಲು ಪ್ರಯತ್ನಿಸಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News