ಲೈಂಗಿಕ ಕಿರುಕುಳ ಪ್ರಕರಣದ ಬಳಿಕ ನಟಿಯ ಬೇಡಿಕೆ ಹೆಚ್ಚಿದೆ ಎಂದ ಕೇರಳ ಮಾಜಿ ಶಾಸಕ!

Update: 2022-08-12 03:01 GMT
ಪಿ.ಸಿ. ಜಾರ್ಜ್ (Photo: Facebook)

ಕೊಟ್ಟಾಯಂ: ಕೇರಳದ ನಟಿಯೊಬ್ಬರು 2017ರಲ್ಲಿ ಅಪಹರಣ ಮತ್ತು ಅತ್ಯಾಚಾರಕ್ಕೆ ಒಳಗಾದ ಬಳಿಕ ಅವರಿಗೆ ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ಸಿಕ್ಕಿ ಪ್ರಯೋಜನವಾಗಿದೆ ಎಂಬ ಹೇಳಿಕೆ ನೀಡುವ ಮೂಲಕ ಹಿರಿಯ ರಾಜಕಾರಣಿ ಹಾಗೂ ಮಾಜಿ ಶಾಸಕ ಪಿ.ಸಿ.ಜಾರ್ಜ್(PC George) ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಪಿ.ಸಿ. ಜಾರ್ಜ್, ಈ ಪ್ರಕರಣದ ಬಗ್ಗೆ ಉಲ್ಲೇಖಿಸಿ, ನಟಿಯ ಬಗ್ಗೆ ಸಂತ್ರಸ್ತೆ ಎಂಬ ಪದ ಬಳಕೆ ಬಗ್ಗೆಯೂ ಅಣಕವಾಡಿದ್ದರು.

"ಸಂತ್ರಸ್ತೆ ಇದೀಗ ಹಲವು ಚಿತ್ರಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ.. ಆ ಪ್ರಕರಣದ ಬಳಿಕ ಆಕೆಗೆ ಯಾವುದೇ ನಷ್ಟವಾಗಿಲ್ಲ ಎಂದು ನನಗೆ ಅನಿಸುವುದಿಲ್ಲ. ಆ ಘಟನೆ ನಿಜವಾಗಿದ್ದಲ್ಲಿ ಮಹಿಳೆಯಾಗಿ ಆಕೆ ಜೀವನದಲ್ಲಿ ದೊಡ್ಡ ನಷ್ಟ ಅನುಭವಿಸಿರಬಹುದು. ಆದರೆ ಇತರ ಕ್ಷೇತ್ರಗಳಲ್ಲಿ ಆಕೆ ಸಾಕಷ್ಟು ಲಾಭ ಪಡೆದಿದ್ದಾರೆ ಎನ್ನುವುದು ನನ್ನ ನಂಬಿಕೆ" ಎಂದು ಹೇಳಿದ್ದರು.

ಇದಕ್ಕೂ ಮುನ್ನ ಕೂಡಾ ಪತ್ರಿಕಾಗೋಷ್ಠಿಯಲ್ಲಿ ಈ ಮಾಜಿ ಶಾಸಕ ನಟಿ ವಿರುದ್ಧ ಕೀಳು ಅಭಿರುಚಿಯ ಹೇಳಿಕೆ ನೀಡಿ, ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿರುವ ನಟ ದಿಲೀಪ್‍ಗೆ ಬೆಂಬಲ ಸೂಚಿಸಿದ್ದರು. ಲೈಂಗಿಕ ಕಿರುಕುಳ ಮತ್ತು ಮುಸ್ಲಿಂ ಸಮುದಾಯದ ವಿರುದ್ಧದ ಹೇಳಿಕೆಗಾಗಿ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು.

ಮೂರು ದಶಕಗಳಿಂದ ಪೂಂಜಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜಾರ್ಜ್, ಕಳೆದ ಚುನಾವಣೆಯಲ್ಲಿ ಎಲ್‍ಡಿಎಫ್ ಅಭ್ಯರ್ಥಿ ವಿರುದ್ಧ ಹೀನಾಯ ಸೋಲು ಕಂಡಿದ್ದರು.

ಪೊಲೀಸರ ಪ್ರಕಾರ, ನಟಿಯನ್ನು ಆರೋಪಿಗಳು, 2017ರ ಫೆಬ್ರವರಿ 17ರಂದು ರಾತ್ರಿ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿ ಎರಡು ಗಂಟೆ ಕಾಲ ಕಾರಿನ ಒಳಗೆಯೇ ಲೈಂಗಿಕ ಕಿರುಕುಳ ನೀಡಿ, ಬಳಿಕ ತಪ್ಪಿಸಿಕೊಂಡಿದ್ದರು. ನಟಿಯನ್ನು ಬ್ಲ್ಯಾಕ್‍ಮೇಲ್ ಮಾಡಲು ಇಡೀ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದರು ಎನ್ನಲಾಗಿದೆ. ನಟ ದಿಲೀಪ್ ಸೇರಿದಂತೆ 8 ಮಂದಿಯನ್ನು ಪ್ರಕರಣದಲ್ಲಿ ಬಂಧಿಸಲಾಗಿತ್ತು. ದಿಲೀಪ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಇದನ್ನೂ ಓದಿ: ಚೀನಿ ಕಂಪೆನಿಯ ʼಮಾತ್ರೆʼ ಕೇಕ್: ವೈರಲ್ ವಿಡಿಯೋ ಸತ್ಯಾಂಶವೇನು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News