ಕೋವಿಡ್ ಭೀತಿ: ಸ್ವಾತಂತ್ರೋತ್ಸವ ಆಚರಣೆ ಸಂದರ್ಭ ಜನಸಂದಣಿ ತಪ್ಪಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

Update: 2022-08-12 13:59 GMT
ಫೈಲ್ ಚಿತ್ರ

ಹೊಸದಿಲ್ಲಿ,ಆ.12: ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರುವುದನ್ನು ತಪ್ಪಿಸುವಂತೆ ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿರುವ ಕೇಂದ್ರ ಗೃಹ ಸಚಿವಾಲಯವು,ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವಂತೆ ಆಗ್ರಹಿಸಿದೆ.

ಕೋವಿಡ್ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಾತಂತ್ರ ದಿನದ ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರುವುದನ್ನು ತಪ್ಪಿಸಬೇಕು. ಕೋವಿಡ್ ಮಾರ್ಗಸೂಚಿಗಳ ಪಾಲನೆ ಕಡ್ಡಾಯವಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಪ್ರಮುಖ ಸ್ಥಳಗಳಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಕೈಗೊಳ್ಳುವಂತೆಯೂ ಕೇಂದ್ರವು ಎಲ್ಲ ರಾಜ್ಯಗಳನ್ನು ಆಗ್ರಹಿಸಿದೆ.

  ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 16,561 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಹೊಸದಾಗಿ 49 ಸಾವುಗಳು ವರದಿಯಾಗಿದ್ದು, ಕೋವಿಡ್ ಸಾವುಗಳ ಒಟ್ಟು ಸಂಖ್ಯೆ 5,26,928ಕ್ಕೇರಿದೆ. ಹೊಸದಾಗಿ ವರದಿಯಾಗಿರುವ ಸಾವುಗಳ ಪೈಕಿ 10 ಸಾವುಗಳು ಕೇರಳದಲ್ಲಿ ಹಿಂದೆಯೇ ಸಂಭವಿಸಿದ್ದರೂ ಬುಧವಾರ ದಾಖಲಾಗಿದ್ದವು. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 18,053 ಚೇತರಿಕೆಗಳು ವರದಿಯಾಗಿವೆ. ಪ್ರಸ್ತುತ ದೇಶಾದ್ಯಂತ ಚೇತರಿಕೆ ದರ ಶೇ.98.53ರಷ್ಟಿದೆ. ದೇಶದಲ್ಲಿ 1,23,535 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ದೈನಂದಿನ ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರಗಳು ಅನುಕ್ರಮವಾಗಿ ಶೇ.5.44 ಮತ್ತು ಶೇ.4.88ರಷ್ಟಿವೆ.

ದಿಲ್ಲಿ,ಕೇರಳ,ಕರ್ನಾಟಕ,ಮಹಾರಾಷ್ಟ್ರ,ಒಡಿಶಾ,ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆಯೇ ಕಳೆದ ವಾರ ಈ ರಾಜ್ಯಗಳಿಗೆ ಪತ್ರ ಬರೆದಿದ್ದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ ಭೂಷಣ ಅವರು,ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸುವಂತೆ,ಕೋವಿಡ್ ಶಿಷ್ಟಾಚಾರಗಳ ಪಾಲನೆಯನ್ನು ಉತ್ತೇಜಿಸುವಂತೆ ಮತ್ತುಲಸಿಕೆ ನೀಡಿಕೆಯ ವೇಗವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಮುಂಬರುವ ಹಬ್ಬಗಳ ಋತುವಿನಲ್ಲಿ ಸೋಂಕು ಉಲ್ಬಣಗೊಳ್ಳುವ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದರು.

ಕಳೆದೊಂದು ತಿಂಗಳಿನಿಂದ ದಿಲ್ಲಿಯಲ್ಲಿ ಅತಿ ಹೆಚ್ಚಿನ ದೈನಂದಿನ ಪ್ರಕರಣಗಳು ವರದಿಯಾಗುತ್ತಿವೆ. ಜುಲೈನಲ್ಲಿ ಕೇರಳದಲ್ಲಿ ಸರಾಸರಿ 2,347 ಮತ್ತು ಮಹಾರಾಷ್ಟ್ರದಲ್ಲಿ 2,135 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದ ಅವರು,ಸೋಂಕು ಇನ್ನಷ್ಟು ಹರಡುವುದನ್ನು ತಡೆಯಲು ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳ ಮೇಲೆ ನಿಕಟ ನಿಗಾಯಿರಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News