ಚೂರಿ ಇರಿತಕ್ಕೆ ಒಳಗಾಗಿರುವ ಸಲ್ಮಾನ್ ರಶ್ದಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ

Update: 2022-08-13 15:53 GMT
ಸಲ್ಮಾನ್ ರಶ್ದಿ (PTI)

ವೆಂಟಿಲೇಟರ್ ನಲ್ಲಿ ಸಲ್ಮಾನ್ ರಶ್ದಿ: ಕಣ್ಣು, ಯಕೃತ್ತಿಗೆ ತೀವ್ರ ಹಾನಿ

ನ್ಯೂಯಾರ್ಕ್, ಆ.13: ನ್ಯೂಯಾರ್ಕ್ನಲ್ಲಿ ಶುಕ್ರವಾರ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದ ಸಂದರ್ಭ ಚೂರಿ ಇರಿತಕ್ಕೊಳಗಾಗಿರುವ ಲೇಖಕ ಸಲ್ಮಾನ್ ರಶ್ದಿ ಆರೋಗ್ಯಸ್ಥಿತಿ ಗಂಭೀರವಾಗಿದ್ದು ಅವರು ವೆಂಟಿಲೇಟರ್ ನಲ್ಲಿದ್ದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ರಶ್ದಿ ಮೇಲೆ ದಾಳಿ ಮಾಡಿದಾತನನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ರಶ್ದಿಯ ತೋಳಿನ ನರಗಳು ತುಂಡಾಗಿದ್ದು ಕಣ್ಣು ಮತ್ತು ಯಕೃತ್ತಿಗೆ ಹಾನಿಯಾಗಿದ್ದು ಕಣ್ಣು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ದೊರಕಿರುವ ಸುದ್ಧಿ ಕೆಟ್ಟದಾಗಿದೆ. ಸಲ್ಮಾನ್ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ತೋಳಿನ ನರಗಳು ತುಂಡಾಗಿವೆ, ಯಕೃತ್ತಿಗೆ ಚೂರಿಯೇಟು ಬಿದ್ದಿರುವುದರಿಂದ ತೀವ್ರ ಹಾನಿಯಾಗಿದೆ ಎಂದು ರಶ್ದಿಯ ಏಜೆಂಟ್ ಆಂಡ್ರ್ಯೂ ವಿಲಿ ಮಾಹಿತಿ ನೀಡಿದ್ದಾರೆ. ದಾಳಿ ಮಾಡಿದಾತನನ್ನು ನ್ಯೂಜೆರ್ಸಿಯ ಹದಿ ಮತರ್(24) ಎಂದು ಗುರುತಿಸಲಾಗಿದ್ದು ದಾಳಿಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ.

ಮತರ್ ನ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರಾಥಮಿಕ ಪರಿಶೀಲನೆಯಲ್ಲಿ ಆತ ಶಿಯಾ ಉಗ್ರವಾದ ಮತ್ತು ಇರಾನ್ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್(ಐಆರ್ಜಿಸಿ)ಯ ಬಗ್ಗೆ ಸಹಾನುಭೂತಿ ಹೊಂದಿರುವುದು ಕಂಡುಬಂದಿದೆ ಎಂದು ನ್ಯೂಯಾರ್ಕ್ ರಾಜ್ಯ ಪೊಲೀಸರು ಹೇಳಿದ್ದಾರೆ. ನೈಋತ್ಯ ನ್ಯೂಯಾರ್ಕ್ ರಾಜ್ಯದ ಚೌಟಕ್ವಾ ಸಂಸ್ಥೆಯ ವೇದಿಕೆಯಲ್ಲಿ ಉಪನ್ಯಾಸ ನೀಡಲು ರಶ್ದಿ ಸಜ್ಜಾಗಿದ್ದ ಸಂದರ್ಭ ವೇದಿಕೆಗೆ ನುಗ್ಗಿದ್ದ ಹದಿ ಮತರ್ ರಶ್ದಿಯ ಮೇಲೆ ಚೂರಿಯಿಂದ ದಾಳಿ ನಡೆಸಿದ್ದ. ವೇದಿಕೆಯಲ್ಲಿದ್ದ ಸಂದರ್ಶಕ ಹೆನ್ರೀ ರೀಸ್ಗೂ ತಲೆಗೆ ಗಾಯವಾಗಿತ್ತು.

ಸಭೆಯಲ್ಲಿದ್ದ ವೈದ್ಯರೊಬ್ಬರು ರಶ್ದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಸಮೀಪದ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇಂದು ನಡೆದಿರುವುದು ದ್ವೇಷದ ಹಿಂಸಾತ್ಮಕ ಅಭಿವ್ಯಕ್ತಿಯಾಗಿದ್ದು ನಮ್ಮ ಅಂತರಂಗವನ್ನು ಬೆಚ್ಚಿಬೀಳಿಸಿದೆ ಎಂದು ಚೌಟಕ್ವಾ ಸಂಸ್ಥೆ ಹೇಳಿಕೆ ನೀಡಿದೆ. ಈ ಘಟನೆ ಭಯಾನಕ ಮತ್ತು ಖಂಡನೀಯವಾಗಿದ್ದು ಬೈಡನ್ ಆಡಳಿತ ರಶ್ದಿಯವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ಪ್ರತಿಕ್ರಿಯಿಸಿದ್ದಾರೆ.

ಚೂರಿ ಇರಿತವನ್ನು ಖಂಡಿಸಿರುವ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್, ರಶ್ದಿ ಅಧಿಕಾರದಲ್ಲಿದ್ದವರಿಗೆ ಸತ್ಯವನ್ನು ಮಾತನಾಡಲು ಹಿಂಜರಿಯದ ವ್ಯಕ್ತಿಯಾಗಿದ್ದರು ಎಂದು ಶ್ಲಾಘಿಸಿದ್ದಾರೆ.

ಭಾರತೀಯ ಮೂಲದ, ಬ್ರಿಟನ್ ಪ್ರಜೆಯಾಗಿರುವ 75 ವರ್ಷದ ರಶ್ದಿ ಕಳೆದ 20 ವರ್ಷದಿಂದ ಅಮೆರಿಕದಲ್ಲಿ ನೆಲೆಸಿದ್ದು 1988ರಲ್ಲಿ ಅವರು ಪ್ರಕಟಿಸಿದ 'ಸಟಾನಿಕ್ ವರ್ಸಸ್' ಕಾದಂಬರಿ ಪ್ರವಾದಿ ಮುಹಮ್ಮದರಿಗೆ ಅಗೌರವ ತೋರಿಸಿದೆ ಎಂದು ಹಲವು ಧರ್ಮಗುರುಗಳು ಖಂಡಿಸಿದ್ದರು. ಆ ಬಳಿಕ ರಶ್ದಿಗೆ ಜೀವಬೆದರಿಕೆ ಬಂದಿತ್ತು. ರಶ್ದಿಯನ್ನು ಹತ್ಯೆಗೈದವರಿಗೆ ಬಹುಮಾನ ನೀಡುವುದಾಗಿ ಇರಾನ್ನ ಮುಖಂಡ ಅಯತುಲ್ಲಾ ಖಾಮಿನೈ ಘೋಷಿಸಿದ್ದರು. ಆ ಬಳಿಕ ಅವರು ಸುಮಾರು 1 ದಶಕ ಬ್ರಿಟನ್ನಲ್ಲಿ ಪೊಲೀಸ್ ರಕ್ಷಣೆಯಲ್ಲಿದ್ದು ನಿರಂತರ ಮನೆ ಬದಲಾಯಿಸುತ್ತಿದ್ದರು. ಖಾಮಿನೈ ಅವರ ಆದೇಶವನ್ನು ಜಾರಿಗೊಳಿಸುವುದಿಲ್ಲ ಎಂದು 1988ರಲ್ಲಿ ಇರಾನ್ ಸರಕಾರ ಪ್ರಕಟಿಸಿದ ಬಳಿಕ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ ರಶ್ದಿ, 2000ನೇ ಇಸವಿಯಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ: ರಶ್ದಿ ಮೇಲಿನ ದಾಳಿಗೆ ವ್ಯಾಪಕ ಖಂಡನೆ

ಲೇಖಕ ಸಲ್ಮಾನ್ ರಶ್ದಿ ಮೇಲಿನ ದಾಳಿಯನ್ನು ವಿಶ್ವದಾದ್ಯಂತದ ಸಾಹಿತಿಗಳು ಮತ್ತು ರಾಜಕೀಯ ಮುಖಂಡರು ತೀವ್ರವಾಗಿ ಖಂಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದಿದ್ದಾರೆ. 'ದಾಳಿಯಿಂದ ಆಘಾತ ಮತ್ತು ತೀವ್ರ ನೋವಾಗಿದೆ .

ತಮ್ಮ ಹರಿತವಾದ ಪದಗಳಿಂದ ಅವರು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರೂ ಎಂದಿಗೂ ಕುಗ್ಗಲಿಲ್ಲ. ದುರ್ಬಲರು ಮತ್ತು ಬೆದರಿಕೆಗೆ ಒಳಗಾದ ಇತರರಿಗೆ ನೆರವಾಗಲು ದಣಿವರಿಯದ ಶಕ್ತಿಯನ್ನು ವಿನಿಯೋಗಿಸಿದ್ದಾರೆ. ಅವರ ಧ್ವನಿಯನ್ನು ಮೌನಗೊಳಿಸಲಾಗದು ಎಂಬ ಉತ್ಕಟ ವಿಶ್ವಾಸ ನಮಗಿದೆ' ಎಂದು ಸಾಹಿತ್ಯ ಸಂಘಟನೆ 'ಪೆನ್' ಅಮೆರಿಕದ ಸಿಇಒ ಸುಝಾನೆ ನೋಸೆಲ್ ಪ್ರತಿಕ್ರಿಯಿಸಿದ್ದಾರೆ.

ವಿಶ್ವದಾದ್ಯಂತ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕನಾಗಿರುವ 'ಪೆನ್' ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದರು ರಶ್ದಿ. ಸುರಕ್ಷಿತ ಆಶ್ರಯದ ಅಗತ್ಯವಿರುವ ಉಕ್ರೇನ್ನ ಸಾಹಿತಿಗಳಿಗೆ ನೆರವಾಗುವ ಬಗ್ಗೆ ಶುಕ್ರವಾರ ತನಗೆ ರಶ್ದಿ ಇ-ಮೇಲ್ ಮಾಡಿದ್ದರು ಎಂದೂ ನೋಸೆಲ್ ಹೇಳಿದ್ದಾರೆ. 'ಈ ಭಯಾನಕ ದಾಳಿ ಚಿಂತನೆ ಮತ್ತು ವಾಕ್ಸ್ವಾತಂತ್ರ್ಯದ ಮೇಲಿನ ಆಕ್ರಮಣವನ್ನು ಸಂಕೇತಿಸುತ್ತದೆ. ಇವು ನಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಆಧಾರವಾಗಿವೆ.

ಸಲ್ಮಾನ್ ಪ್ರಪಂಚಾದ್ಯಂತ ಕಿರುಕುಳಕ್ಕೆ ಒಳಗಾದ ಬರಹಗಾರರು ಮತ್ತು ಪತ್ರಕರ್ತರ ಸ್ಪೂರ್ತಿದಾಯಕ ರಕ್ಷಕರಾಗಿದ್ದಾರೆ. ಉದಾರ ಮನೋಭಾವದ, ಅಗಾಧ ಪ್ರತಿಭೆ ಮತ್ತು ಅಪಾರ ಧೈರ್ಯದ ಅವರನ್ನು ತಡೆಯಲು ಸಾಧ್ಯವಿಲ್ಲ' ಎಂದು ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಇಯಾನ್ ಮೆಕಿವಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News