ಗುಜರಾತ್ ನಲ್ಲಿ ತಿರಂಗಾ ಯಾತ್ರೆ ವೇಳೆ ಮುನ್ನುಗ್ಗಿದ ದನ; ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್‍ಗೆ ಗಾಯ

Update: 2022-08-13 14:10 GMT

ಹೊಸದಿಲ್ಲಿ: ಗುಜರಾತ್‍ನ ಮೆಹ್ಸಾನ ಜಿಲ್ಲೆಯ ಕಡಿ ಪಟ್ಟಣದಲ್ಲಿ ಇಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ನೇತೃತ್ವದಲ್ಲಿ ನಡೆಯುತ್ತಿದ್ದ ತಿರಂಗಾ ಯಾತ್ರೆ ವೇಳೆ ದನವೊಂದು ಮುನ್ನುಗ್ಗಿದ ಪರಿಣಾಮ ಪಟೇಲ್ ಅವರ ಎಡಗಾಲಿಗೆ ಗಾಯಗಳಾಗಿವೆ. ಘಟನೆಯಿಂದಾಗಿ ಅವರ ಎಡಗಾಲಿನಲ್ಲಿ ಸಣ್ಣ ಮಟ್ಟಿನ ಮೂಳೆ ಮುರಿತ ಉಂಟಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಈ ತಿರಂಗಾ ಯಾತ್ರೆಯಲ್ಲಿ ಸುಮಾರು 2000 ಮಂದಿ ಭಾಗವಹಿಸಿದ್ದರು ಹಾಗೂ ಶೇ 70ರಷ್ಟು ಹಾದಿ ಕ್ರಮಿಸಿ ಒಂದು ತರಕಾರಿ ಮಾರುಕಟ್ಟೆ ಸ್ಥಳ ಪ್ರವೇಶಿಸುತ್ತಿದ್ದಂತೆಯೇ ಒಂದು ದನ ಮುನ್ನುಗ್ಗಿ ಬಂದಿತ್ತು.

ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ ನಿತಿನ್ ಪಟೇಲ್ ಅವರು ಕೈಯ್ಯಲ್ಲಿ ರಾಷ್ಟ್ರಧ್ವಜ ಹಿಡಿದಿರುವುದು ಹಾಗೂ ಎಲ್ಲಿಂದಲೋ ಒಂದು ದನ ಎಲ್ಲರನ್ನು ದಾಟಿ ಮುಂದೆ ಬಂದಾಗ ನಿತನ್ ಪಟೇಲ್ ಅವರು ಸಮತೋಲನ ಕಳೆದುಕೊಂಡು ನೆಲಕ್ಕೆ ಬೀಳುವುದು ಕಾಣಿಸುತ್ತದೆ.ಅವರನ್ನು ತಕ್ಷಣ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.
ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು  ಟ್ವೀಟ್ ಮಾಡಿರುವ ಇನ್ನೊಂದು ವೀಡಿಯೋದಲ್ಲಿ ತಮ್ಮ ಎಡಗಾಲಿಗೆ ಬ್ಯಾಂಡೇಜ್ ಹಾಕಲ್ಪಟ್ಟ ನಿತಿನ್ ಪಟೇಲ್ ಅವರು ಗಾಲಿಕುರ್ಚಿಯಲ್ಲಿ ಬರುತ್ತಿರುವುದು ಕಾಣಿಸುತ್ತದೆ.

ಮೆರವಣಿಗೆಯ ವೇಳೆ ದನಗಳ ಹಿಂಡೊಂದು ಆತಂಕ ಸೃಷ್ಟಿಸಿತ್ತೆಂದು ತಿಳಿದು ಬಂದಿದೆ.

ನಿತಿನ್ ಪಟೇಲ್ ಅವರು ಹಿಂದಿನ ವಿಜಯ್ ರುಪಾನಿ ನೇತೃತ್ವದ ಸರಕಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News