ಕಲ್ಮಾಡಿಯ ವೆಲಂಕಣಿ ಮಾತೆಯ ಕೇಂದ್ರ; ಉಡುಪಿ ಧರ್ಮಪ್ರಾಂತದ ಅಧಿಕೃತ ಪುಣ್ಯಕ್ಷೇತ್ರವಾಗಿ ಆ.15ರಂದು ಘೋಷಣೆ

Update: 2022-08-13 14:49 GMT

ಉಡುಪಿ : ಉಡುಪಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿಯ ಕಲ್ಮಾಡಿ ಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು ಇದೇ ಆ.15ರಂದು ಉಡುಪಿ ಧರ್ಮಪ್ರಾಂತದ ಪುಣ್ಯಕ್ಷೇತ್ರವೆಂದು ಅಧಿಕೃತವಾಗಿ ಘೋಷಿಸಲಾಗುವುದು.

ಈ ಧಾರ್ಮಿಕ ಕಾರ್ಯಕ್ರಮವು ಆ.೧೫ರಂದು ಬೆಳಗ್ಗೆ ೧೦ಗಂಟೆಗೆ ದಿವ್ಯ ಬಲಿಪೂಜೆಯೊಂದಿಗೆ ನಡೆಯಲಿದೆ. ಇದರಲ್ಲಿ ಉಡುಪಿಯ ಬಿಷಪ್ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಸೇರಿದಂತೆ ಮಂಗಳೂರು, ಶಿವಮೊಗ್ಗ, ಗುಲ್ಬರ್ಗಾ, ಬಳ್ಳಾರಿ, ಬೆಳ್ತಂಗಡಿ ಹಾಗೂ ಪುತ್ತೂರಿನ ಬಿಷಪ್‌ರೊಂದಿಗೆ ಮಂಗಳೂರಿನ ನಿವೃತ್ತ ಬಿಷಪ್ ಅ.ವಂ.ಡಾ.ಅಲೋಷಿಯಸ್ ಪಾವ್ಲ್ ಡಿಸೋಜ ಅವರು ಪಾಲ್ಗೊಳಲಿದ್ದಾರೆ. 

ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಪೂರ್ವಭಾವಿಯಾಗಿ ಒಂಭತ್ತು ದಿನಗಳ ನೊವೆನಾ ಪ್ರಾರ್ಥನೆಗಳು ಆ.೬ರಿಂದ ಪ್ರಾರಂಭಗೊಂಡಿದ್ದು, ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತದ ವಿವಿಧ ಧರ್ಮಗುರುಗಳು ವಿವಿಧ ಉದ್ದೇಶ ಗಳಿಗಾಗಿ ಆರಾಧನೆ ಹಾಗೂ ಬಲಿಪೂಜೆಯನ್ನು ನಡೆಸಿಕೊಟ್ಟಿದ್ದಾರೆ.

ವೆಲಂಕಣಿಮಾತೆ ಮೂರ್ತಿಯ ಮೆರವಣಿಗೆ ಆ.೧೪ರ ಅಪರಾಹ್ನ ೨:೩೦ರಿಂದ ಆದಿಉಡುಪಿ ಜಂಕ್ಷನ್‌ನಿಂದ ಚರ್ಚ್‌ವರೆಗೆ ನಡೆಯಲಿದೆ. ಮೆರವಣಿಗೆಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ ತನ್ನ ಅಸ್ತಿತ್ವದ ಸುವರ್ಣ ಮಹೋತ್ಸವ (೧೯೭೨-೨೦೨೨) ಸಂಭ್ರಮವೂ ಆ.೧೫ರಂದು ನಡೆಯಲಿದೆ ಎಂದು ಸ್ಟೆಲ್ಲಾ ಮಾರಿಸ್ ಚರ್ಚ್‌ನ ಧರ್ಮಗುರುಗಳಾದ ವಂ.ಬ್ಯಾಪ್ಟಿಸ್ಟ್ ಮಿನೇಜಸ್ ತಿಳಿಸಿದ್ದಾರೆ.

೧೯೮೮ರಲ್ಲಿ ಸ್ಥಾಪನೆ: ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವು ವಿಶ್ವದಾದ್ಯಂತ ಪ್ರಸಿದ್ಧವಾಗಿದ್ದು, ವೆಲಂಕಣಿ ಮೂರ್ತಿಯನ್ನು ತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತರಲಾಗಿತ್ತು. ಈ ಪ್ರತಿಮೆಯನ್ನು ೧೯೮೮ರ ಆ.೧೫ರಂದು ಮಂಗಳೂರಿನ ಅಂದಿನ ಬಿಷಪ್ ಅ.ವಂ.ಡಾ.ಬಾಸಿಲ್ ಡಿಸೋಜ ಅವರು ಪ್ರತಿಷ್ಠಾಪಿಸಿದ್ದರು.

ದೋಣಿಯಾಕಾರದಲ್ಲಿರುವ ಸ್ಟೆಲ್ಲಾ ಮಾರಿಸ್ ಚರ್ಚ್‌ನ ಹೊಸ ಕಟ್ಟಡ ಹಾಗೂ ದೀಪಸ್ಥಂಭ ಆಕಾರದ ಗಂಟೆಗೋಪುರದ ಕಾಮಗಾರಿ ೨೦೧೨ರಲ್ಲಿ ಪ್ರಾರಂಭಗೊಂಡಿತ್ತು. ಇವುಗಳನ್ನು ೨೦೧೮ರ ಜ.೬ರಂದು ಉಡುಪಿಯ ಬಿಷಪ್ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News