ಗಡಿಯಲ್ಲಿ ಶಾಂತಿ ನೆಲೆಸುವವರೆಗೂ ಭಾರತ-ಚೀನಾ ನಡುವೆ ಸಹಜ ಸಂಬಂಧ ಸಾಧ್ಯವಿಲ್ಲ: ಎಸ್.ಜೈಶಂಕರ್

Update: 2022-08-13 15:07 GMT

ಬೆಂಗಳೂರು,ಆ.23: ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವವರೆಗೂ ಭಾರತ ಮತ್ತು ಚೀನಾ ನಡುವೆ ಸಹಜ ಸಂಬಂಧ ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.


ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,‘ಚೀನಾ ಗಡಿಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಿದರೆ ಅದು ನಮ್ಮ ನಡುವಿನ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ನಮ್ಮ ನಿಲುವನ್ನು ನಾವು ಕಾಯ್ದುಕೊಂಡಿದ್ದೇವೆ’ ಎಂದು ತಿಳಿಸಿದರು.

ವಾಸ್ತವಿಕ ನಿಯಂತ್ರಣ ರೇಖೆಯಿಂದ ಚೀನಿ ಸೇನೆಯ ಹಿಂದೆಗೆತ ವಿಷಯದಲ್ಲಿ 16 ಸುತ್ತುಗಳ ಕಮಾಂಡರ್ ಮಟ್ಟದ ಮಾತುಕತೆಗಳು ನಡೆದಿದ್ದರೂ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ ಎಂದು ತಿಳಿಸಿದ ಅವರು,‘ಕಳೆದ ಎರಡು ಚಳಿಗಾಲಗಳಿಂದಲೂ ಭಾರತೀಯ ಸೇನೆಯು ತನ್ನ ಪಡೆಗಳನ್ನು ಅಲ್ಲಿ ನಿಯೋಜಿಸಿದೆ ಮತ್ತು ಇದು ನಮ್ಮ ದೃಢ ಸಂಕಲ್ಪವನ್ನು ತೋರಿಸುತ್ತಿದೆ. ಚೀನಿ ಪಡೆಗಳು ಗಡಿಗೆ ತೀರ ಸಮೀಪದಲ್ಲಿದ್ದ ಸ್ಥಳಗಳಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ನಾವು ಕೆಲವು ಗಣನೀಯ ಪ್ರಗತಿ ಸಾಧಿಸಿದ್ದೇವೆ, ಆದರೆ ಅವರು ಹಿಂದೆ ಸರಿದಿರದ ಕೆಲವು ಸ್ಥಳಗಳು ಈಗಲೂ ಇವೆ ’ ಎಂದರು.

ಚೀನಾದ ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮವು ಭಾರತದ ಸಾರ್ವಭೌಮತೆಯನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ ಜೈಶಂಕರ್,‘ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಉಲ್ಲಂಘಿಸಲಾಗಿದೆ. ವಾಸ್ತವದಲ್ಲಿ ಇನ್ನೊಂದು ದೇಶವು ಆಕ್ರಮಿಸಿಕೊಂಡಿರುವ ಸಾರ್ವಭೌಮ ಭಾರತೀಯ ಪ್ರದೇಶದಲ್ಲಿ ತೃತೀಯ ರಾಷ್ಟ್ರವು ಚಟುವಟಿಕೆಗಳನ್ನು ನಡೆಸುತ್ತಿದೆ ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News