ತ್ರಿವರ್ಣ ಧ್ವಜವನ್ನು ಗೌರವದಿಂದ ಕಾಣಬೇಕು: ಶೋಭಾ ಕರಂದ್ಲಾಜೆ

Update: 2022-08-13 17:14 GMT

ಕಾರ್ಕಳ: ತ್ರಿವರ್ಣ ಧ್ವಜ ಸ್ವಾಭಿಮಾನದ ಸಂಕೇತ. ಧ್ವಜಕ್ಕೆ ಯಾವುದೇ ರೀತಿಯಲ್ಲಿ ಅವಮಾನವಾಗದಂತೆ ಗೌರವದಿಂದ ಕಾಣಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ಅವರು ಶನಿವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಂಗವಾಗಿ ಬಿಜೆಪಿ ಯುವಮೋರ್ಚಾ ವತಿಯಿಂದ ಕಾರ್ಕಳ ಸ್ವರಾಜ್‌ ಮೈದಾನದಿಂದ ಗಾಂಧಿ ಮೈದಾನದವರೆಗೆ 75 ಮೀಟರ್‌ ಉದ್ದ ಬೃಹತ್‌ ಧ್ವಜದೊಂದಿಗೆ ನಡೆದ ಶೋಭಾಯಾತ್ರೆ ಸಮಾರೋಪದಲ್ಲಿ ಮಾತನಾಡಿದರು. 

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತ ದೇಶಭಕ್ತರಿಗೆ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ದೇಶದ ಸೈನಿಕರನ್ನು ಸದಾ ಸ್ಮರಿಸುವ ಕಾರ್ಯವಾಗಬೇಕು. ಮಕ್ಕಳಲ್ಲಿ ದೇಶಭಕ್ತಿ, ದೇಶಪ್ರೇಮ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕೆಂದು ಶೋಭಾ ಕರಂದ್ಲಾಜೆ ಹೇಳಿದರು. 

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾದುದು. ಹೋರಾಟದ ಆರಂಭದ ದಿನದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ರಾಣಿ ಅಬ್ಬಕ್ಕ ಉಳ್ಳಾಲದವರು. 1837ರ ಸ್ವಾತಂತ್ರ್ಯದ ಹೋರಾಟ ಮೊಳಗಿದ್ದು ಮಂಗಳೂರಿನಲ್ಲಿ. ದ.ಕ., ಉಡುಪಿ ಜಿಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದು ಇದನ್ನು ಸ್ಮರಿಸುವ ಕಾರ್ಯವಾಗಬೇಕೆಂದು ಸಚಿವ ಸುನೀಲ್‌ ಕುಮಾರ್‌ ಕರೆ ನೀಡಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಂಡಳಿ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ್‌ ಕಾಮತ್‌, ಎಂ.ಕೆ. ವಿಜಯ ಕುಮಾರ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಮೈಸೂರು ಎಲೆಕ್ಟ್ರೀಕಲ್‌ ಇಂಡಸ್ಟ್ರೀ ಅಧ್ಯಕ್ಷ ಕೆ. ಉದಯ ಕುಮಾರ್‌ ಶೆಟ್ಟಿ, ಕುತ್ಯಾರು ನವೀನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್‌ ಶೆಟ್ಟಿ ಸ್ವಾಗತಿಸಿ, ಸುಹಾಸ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News