ಕಾರು ಅಪಘಾತದಲ್ಲಿ ಮರಾಠ ನಾಯಕ ವಿನಾಯಕ್ ಮೇಟೆ ಮೃತ್ಯು

Update: 2022-08-14 04:58 GMT
Photo:PTI

 ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಮರಾಠ ಸಮುದಾಯದ ಮುಖಂಡ ವಿನಾಯಕ್ ಮೇಟೆ (Maratha Leader Vinayak Mete )ಸಾವನ್ನಪ್ಪಿದ್ದಾರೆ.

ಮಡಪ್ ಸುರಂಗದ ಬಳಿ ಮಾಜಿ ವಿಧಾನಪರಿಷತ್ ಸದಸ್ಯ (ಎಂಎಲ್‌ಸಿ)  ಅವರ ಕಾರಿಗೆ ವಾಹನವೊಂದು  ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಎಲ್ಲರಿಗೂ ಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಬಿಜೆಪಿಯ ಮಿತ್ರಪಕ್ಷವಾದ ಶಿವಸಂಗ್ರಾಮ್‌ನ ಮುಖ್ಯಸ್ಥ ಮೇಟೆಯವರನ್ನು ಅಪಘಾತದ ನಂತರ ನವಿ ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದರು.

ಮರಾಠವಾಡ ವಲಯದ ಬೀಡ್ ಜಿಲ್ಲೆಯರಾದ ಮೇಟೆ (52 ವರ್ಷ)ಮರಾಠ ಸಮುದಾಯಕ್ಕೆ  ಮೀಸಲಾತಿ ನೀಡುವ ವಿಚಾರದಲ್ಲಿ ಗಟ್ಟಿ ಧ್ವನಿಯಾಗಿದ್ದರು.

ಮೇಟೆಯವರ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಪೇದೆಯೊಬ್ಬರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಪೊಲೀಸ್ ರಾಮ್ ಡೋಬ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಅವರು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ತಲುಪಿದ್ದಾರೆ.

ಮಹಾರಾಷ್ಟ್ರದ ವಿಧಾನಪರಿಷತ್ತಿನ  (ಎಂಎಲ್‌ಸಿ)  ಮಾಜಿ ಸದಸ್ಯರಾಗಿರುವ ಮೇಟೆ ಅವರು ಪತ್ನಿ, ಒಬ್ಬ ಪುತ್ರ ಹಾಗೂ  ಪುತ್ರಿಯನ್ನು ಅಗಲಿದ್ದಾರೆ.

ಮೇಟೆ ಅವರ ನಿಧನಕ್ಕೆ ಎನ್ ಸಿಪಿ ಅಧ್ಯಕ್ಷ  ಶರದ್ ಪವಾರ್, ಕಾಂಗ್ರೆಸ್ ನಾಯಕ  ಅಶೋಕ್ ಚವಾಣ್, ರಾಜ್ಯ ಸಚಿವ ಚಂದ್ರಕಾಂತ್ ಪಾಟೀಲ್ ಸಹಿತ ರಾಜ್ಯದ ಹಲವಾರು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News