ಒಂದು ದೇಶ, ಭಾಷೆ, ಕಾನೂನು ಜಾರಿಗೆ ಹುನ್ನಾರ: ಪ್ರೊ.ಚಂದ್ರ ಪೂಜಾರಿ

Update: 2022-08-14 16:13 GMT

ಬೈಂದೂರು : ನಮ್ಮದು ಒಕ್ಕೂಟ ವ್ಯವಸ್ಥೆಯೇ ಹೊರತು ಕೇಂದ್ರೀಯ ವ್ಯವಸ್ಥೆ ಅಲ್ಲ. ನಮ್ಮದು ಬಹುತ್ವದಲ್ಲಿ ಏಕತೆ ಹೊಂದಿದ ದೇಶವಾಗಿದೆ. ವಿವಿಧ ಜಾತಿ, ಲಿಂಗ ವರ್ಣ, ಸಂಸ್ಕ್ರತಿ, ಪ್ರದೇಶ ಹೊಂದಿದ ಬಲಿಷ್ಟ ದೇಶ. ಆದರೆ ನಮ್ಮನ್ನಾಳುವ ಸರಕಾರ ಜನರ ಮೇಲೆ ಒಂದು ದೇಶ, ಒಂದೇ ಭಾಷೆ, ಒಂದು ಕಾನೂನು ಜಾರಿ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಹಂಪಿ ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಹಿರಿಯ ಚಿಂತಕ ಪ್ರೊ.ಚಂದ್ರ ಪೂಜಾರಿ ಹೇಳಿದ್ದಾರೆ.

ಸಿಐಟಿಯು ೧೫ನೇ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ಸಿಐಟಿಯು ೧೫ನೆ ರಾಜ್ಯ ಸಮ್ಮೇಳನದ ಅಂಗವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬೈಂದೂರು ಅಂಬೇಡ್ಕರ್ ಭವನದಲ್ಲಿ ರವಿವಾರ ಹಮ್ಮಿಕೊಳ್ಳಲಾದ ನಾರಾಯಣಗುರು ವಿಚಾರಧಾರೆ ಮತ್ತು ಕಾರ್ಮಿಕ ವರ್ಗ ಕುರಿತು ವಿಚಾರ ಸಂಕಿರಣದಲ್ಲಿ ಅವರು ವಿಚಾರ ಮಂಡಿಸಿದರು.

ದುಡಿಯುವ ವರ್ಗ ಒಗ್ಗಟ್ಟಾಗಿ ಶೋಷಣೆ ವಿರುದ್ಧ ಪ್ರಶ್ನಿಸದಂತೆ ಮಾಡ ಲಾಗುತ್ತಿದೆ. ವೈದಿಕಶಾಹಿ, ಪುರೋಹಿತಶಾಹಿ ಹಿಡಿತದಲ್ಲಿ ಇಟ್ಟುಕೊಂಡು ಮೇಲು ಕೀಳು ಪರಂಪರೆಯನ್ನು ಆಚರಿಸಲಾಗುತ್ತಿದೆ. ಈ ಜಾತಿ ತಾರತಮ್ಯ, ಅಸ್ಪ್ರಶ್ಯತೆ ಮೇಲುಕೀಳು ವಿರುದ್ಧ ನಾರಾಯಣ ಗುರು ಒಂದೇ ಜಾತಿ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದಿಸಿದರು ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್ ವಹಿಸಿದ್ದರು.  ಸ್ವಾಗತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಕೋಶಾಧಿಕಾರಿ ಎಚ್.ನರಸಿಂಹ, ಮುಖಂಡರಾದ ರಾಜೀವ ಪಡುಕೋಣೆ, ಗಣೇಶ ತೊಂಡೆಕ್ಕಿ, ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News