ಬದಲಾದ ಕಾಲದಲ್ಲಿ ಪದ್ಯ, ಹಾಡು, ಕತೆಗಳೂ ಸರಕಾಗಿವೆ: ಪ್ರೊ.ಫಣಿರಾಜ್

Update: 2022-08-14 16:16 GMT

ಉಡುಪಿ, ಆ.14: ಸರಕು ಸಂಸ್ಕೃತಿಯ ಈ ಕಾಲದಲ್ಲಿ ಈಗ ಮುದ್ರಿತ ಪುಸ್ತಕ, ಪದ್ಯ, ಕತೆ ಹಾಗೂ ಹಾಡು ಎಲ್ಲವೂ ಒಂದು ಸರಕು ಆಗಿದೆ ಎಂದು ಹಿರಿಯ ಚಿಂತಕ ಪ್ರೊ.ಕೆ.ಫಣಿರಾಜ್ ಹೇಳಿದ್ದಾರೆ.

ಉಡುಪಿ ಸುಹಾಸಂ ವತಿಯಿಂದ ಕವಯತ್ರಿ ಸುಕನ್ಯಾ ಕಳಸ ಅವರ ‘ಮಗಳು ಶಾಲೆಗೆ ಹೋಗಿದ್ದಾಳೆ’ ಕವನ ಸಂಕಲವನ್ನು ರವಿವಾರ ಉಡುಪಿ ಖಾಸಗಿ ಹೊಟೇಲಿನ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಈಗಿನ ಕೆಲವು ಕವನ ಸಂಕಲನಗಳಿಗೆ ಸಂಕಲದ ಗುಣವೇ ಇರುವುದಿಲ್ಲ. ಬೇರೆ ಬೇರೆ ಸಮಯದಲ್ಲಿ ಬರೆದ ಕವನ ಗಳನ್ನು ಒಟ್ಟು ಸೇರಿಸಿ ಪ್ರಕಟಿಸುವುದು ಕನವ ಸಂಕಲನ ಅಲ್ಲ. ಸಂಕಲನ ಗುಣ ಅಂದರೆ ವಸ್ತು ಮತ್ತು ಅದರ ಜೊತೆ ಭಾಷೆಯ ಮೂಲಕ ಕವಿಯ ಅನು ಸಂಧಾನವಾಗಿದೆ ಎಂದರು.

ಕವನ ಸಂಕಲದಲ್ಲಿನ ಕವನ ಒಂದಕ್ಕೊಂದು ಲಯ ಇದ್ದರೆ ಇಡೀ ಸಂಕಲನವೇ ಒಂದು ಅರ್ಥವನ್ನು ನೀಡಲು ಸಾಧ್ಯವಾಗುತ್ತದೆ. ನಮ್ಮ ಹಿರಿಯ ಕವಿಗಳಲ್ಲಿ ಸಂಕಲನ ಗುಣ ನಾವು ಕಾಣಬಹುದಾಗಿದೆ. ಅದರಲ್ಲಿ ತಾತ್ವಿಕ ಯೋಚನೆ ಇರುತ್ತದೆ. ಅದು ಇಲ್ಲದಿದ್ದರೆ ಅದನ್ನು ಸಂಕಲನ ಕರೆಯಲು ಆಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಪುಸ್ತಕ ರೂಪದಲ್ಲಿನ ಕವನ ಸಂಕಲನವನ್ನು ಯಾರಿಗೆ ಬರೆಯುವುದು ಮತ್ತು ಯಾರು ಓದುತ್ತಾರೆ ಎಂಬುದೇ ಇಂದಿನ ದೊಡ್ಡ ಸವಾಲು ಆಗಿದೆ. ಯಾರು,  ಯಾಕೆ ಓದುತ್ತಾರೆ ಎಂಬ ಅನುಮಾನದಲ್ಲೇ ಪುಸ್ತಕ ಪ್ರಕಟಣೆಯನ್ನು ನಿಲ್ಲಿಸುವ ಕಾಲಘಟ್ಟದಲ್ಲಿಯೂ ನಾವು ಇದ್ದೇವೆ. ಪತ್ರಿಕೆಯಲ್ಲಿ ಕೇವಲ ಹಾರಿಕೆಗೆ ಬರೆ ಯುವ ವಿಮರ್ಶೆಯನ್ನು ಕಾಣುವುದು ಬಿಟ್ಟರೆ, ಸಂಕಲಿತ ಗುಣವನ್ನು ಅರ್ಥ ಮಾಡಿಕೊಂಡು, ಇನ್ನೊಂದು ಕವನ ಸಂಕಲನದ ಜೊತೆ ವಿಮರ್ಶೆ ಮಾಡುವ ವ್ಯವಸ್ಥೆ ಕನ್ನಡದಲ್ಲಿ ಕಾಣುತ್ತಿಲ್ಲ ಎಂದರು.

ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಪುಸ್ತಕ ಪರಿಚಯಿಸಿದರು. ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸುಕನ್ಯಾ ಕಳಸ, ಕಾರ್ಯದರ್ಶಿ ಎಚ್.ಗೋಪಾಲ ಭಟ್ ಉಪಸ್ಥಿತರಿ ದ್ದರು. ಉಪಾಧ್ಯಕ್ಷ ಕೃಷ್ಣಮೂರ್ತಿ ರಾವ್ ವಂದಿಸಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News