ʼಸ್ವತಂತ್ರ ದೇಶವೆಂದರೆ ಇದುʼ: ಮತ್ತೆ ಭಾರತವನ್ನು ಶ್ಲಾಘಿಸಿದ ಇಮ್ರಾನ್‌ ಖಾನ್‌

Update: 2022-08-14 17:48 GMT
PHOTO: TWITTER

ಇಸ್ಲಮಾಬಾದ್, ಆ.14: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತೊಮ್ಮೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ.ಭಾರತವು ರಶ್ಯದಿಂದ ತೈಲ ಖರೀದಿಸುವುದನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ದೇಶಗಳನ್ನು ಖಂಡಿಸಿದ ಇಮ್ರಾನ್, ಸ್ಲೊವಾಕಿಯಾದಲ್ಲಿ ನಡೆದ ಬ್ರಟಿಸ್ಲಾವ ಸಮಾವೇಶದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ನೀಡಿದ ಹೇಳಿಕೆಯ ವೀಡಿಯೊದ ತುಣುಕನ್ನು ತೋರಿಸಿದ್ದಾರೆ. ರಶ್ಯದಿಂದ ಕಡಿಮೆ ಬೆಲೆಯ ತೈಲ ಖರೀದಿಸುವುದನ್ನು ವಿರೋಧಿಸಿ ಅಮೆರಿಕ ಹೇರಿದ ತೀವ್ರ ಒತ್ತಡದ ಹೊರತಾಗಿಯೂ ದೃಢ ನಿಲುವು ತಳೆದಿರುವುದಕ್ಕೆ ಜೈಶಂಕರ್ ರನ್ನು ಶ್ಲಾಘಿಸಿದ್ದಾರೆ. ಲಾಹೋರ್‌ನಲ್ಲಿ ನಡೆದ ಬೃಹತ್ ಸಭೆಯಲ್ಲಿ ಇಮ್ರಾನ್‌ ಖಾನ್‌ ಮಾತನಾಡುತ್ತಿದ್ದರು.

ಪಾಕಿಸ್ತಾನದ ಜತೆಗೇ ಸ್ವಾತಂತ್ರ್ಯ ಪಡೆದಿರುವ ಭಾರತವು ದೃಢವಾದ ನಿಲುವು ತಳೆದು, ತನ್ನ ಜನತೆಯ ಆಶಯಕ್ಕೆ ಪೂರಕವಾಗಿ ವಿದೇಶಾಂಗ ನೀತಿಯನ್ನು ರೂಪಿಸಲು ಸಾಧ್ಯ ಎಂದಾದರೆ, ಇವರಾರು ( ಪ್ರಧಾನಿ ಶಹಬಾಝ್ ಶರೀಫ್ ಅವರ ಸರಕಾರ), ಮೊಣಕಾಲ ಮೇಲೆ ಬಗ್ಗಿನಿಂತು ಆದೇಶ ಪಾಲಿಸುವವರು ? ಎಂದು ಟೀಕಿಸಿದ್ದಾರೆ.

‘ರಶ್ಯದಿಂದ ತೈಲ ಖರೀದಿಸಬಾರದು ಎಂದು ಅಮೆರಿಕ ಭಾರತಕ್ಕೆ ಆದೇಶ ನೀಡಿತು. ಭಾರತವು ಅಮೆರಿಕದ ಕಾರ್ಯತಂತ್ರದ ಮಿತ್ರದೇಶ, ಪಾಕಿಸ್ತಾನವಲ್ಲ. ರಶ್ಯದ ತೈಲ ಖರೀದಿಸಬೇಡಿ ಎಂದು ಅಮೆರಿಕ ಆದೇಶಿಸಿದಾಗ ಭಾರತದ ವಿದೇಶಾಂಗ ಸಚಿವರು ಏನು ಹೇಳಿದರು ಎಂಬುದನ್ನು ನೀವೇ ಕೇಳಿ’ ಎಂದು ಹೇಳಿದ ಇಮ್ರಾನ್, ಜೈಶಂಕರ್ ಅವರ ಹೇಳಿಕೆಯ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ.
     
‘ಹೀಗೆ ಹೇಳಲು ನೀವ್ಯಾರು. ಯುರೋಪ್ ರಶ್ಯದಿಂದ ಗ್ಯಾಸ್(ಅನಿಲ) ಖರೀದಿಸುತ್ತಿರುವಾಗ ನಮ್ಮ ಜನರ ಅಗತ್ಯಕ್ಕೆ ನಾವೇಕೆ ತೈಲ ಖರೀದಿಸಬಾರದು’ ಎಂದು ಜೈಶಂಕರ್ ಪ್ರಶ್ನಿಸಿದ್ದಾರೆ. ಸ್ವತಂತ್ರ ದೇಶ ಎಂದರೆ ಇದೇ ನೋಡಿ’ ಎಂದು ಇಮ್ರಾನ್ ಭಾರತವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಶಹಬಾಝ್ ಶರೀಫ್ ಸರಕಾರವನ್ನು ಟೀಕಿಸಿದ ಇಮ್ರಾನ್ ‘ನಮ್ಮ ಪಕ್ಷದ ಸರಕಾರವಿದ್ದಾಗ ರಶ್ಯದಿಂದ ತೈಲ ಖರೀದಿಗೆ ಮಾತುಕತೆ ನಡೆದಿತ್ತು. ಆದರೆ ಈಗಿನ ಸರಕಾರ ಅಮೆರಿಕದ ಎದುರು ಮೊಣಕಾಲಲ್ಲಿ ನಿಂತು ಶರಣಾಗಿದೆ. ಅಮೆರಿಕದ ಆದೇಶ ನಿರಾಕರಿಸುವ ಧೈರ್ಯ ಇವರಲ್ಲಿಲ್ಲ. ಈ ಗುಲಾಮಗಿರಿಗೆ ನಾನು ವಿರೋಧಿಯಾಗಿದ್ದೇನೆ’ ಎಂದರು.

ಸ್ಲೊವಾಕಿಯಾದಲ್ಲಿ ನಡೆದಿದ್ದ ಗ್ಲೋಬ್ಸೆಕ್ 2022 ಬ್ರಟಿಸ್ಲಾವ ವೇದಿಕೆಯ ಕಾರ್ಯಕ್ರಮದಲ್ಲಿ ಭಾರತವು ರಶ್ಯದಿಂದ ತೈಲ ಖರೀದಿಯ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ್ದ ಜೈಶಂಕರ್ ‘ ರಶ್ಯದಿಂದ ಗ್ಯಾಸ್(ಅನಿಲ) ಖರೀದಿಸುವುದೂ ಯುದ್ಧಕ್ಕೆ ಆರ್ಥಿಕ ನೆರವು ನೀಡಿದಂತೆ ಆಗುವುದಿಲ್ಲವೇ? ಎಂದು ತಿರುಗೇಟು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News