ದೇಶದ ರಕ್ಷಣೆಯಲ್ಲಿ ನಿರತರಾಗಿರುವ ವೀರ ಯೋಧರನ್ನು ನಾವು ಸದಾ ಸ್ಮರಿಸಬೇಕಾಗಿದೆ: ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌

Update: 2022-08-15 11:11 GMT

ಕಾರ್ಕಳ : ದೇಶದ ರಕ್ಷಣೆಯಲ್ಲಿ ನಿರತರಾಗಿರುವ ವೀರ ಯೋಧರು, ಹಸಿವು ನೀಗಿಸುವ ಅನ್ನದಾತರನ್ನು ನಾವು ಸದಾ ಸ್ಮರಿಸಬೇಕಾಗಿದೆ. ಅವರನ್ನು ಅತ್ಯಂತ ಗೌರವದಿಂದ ಕಾಣಬೇಕೆಂದು ಕಾರ್ಕಳ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌  ಕರೆ ನೀಡಿದರು. 

ಅವರು ಕಾರ್ಕಳ ತಾಲೂಕು ಆಡಳಿತ ವತಿಯಿಂದ ಗಾಂಧಿ ಮೈದಾನದಲ್ಲಿ ನಡೆದ 76ನೇ ಸ್ವಾತಂತ್ರೋತ್ಸವ ಧ್ವಜಾರೋಹಣಗೈದು ಸಂದೇಶ ನೀಡಿದರು. 

ನಾವಿಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ, ಸಡಗರದಲ್ಲಿದ್ದೇವೆ. 200 ವರ್ಷಗಳ ಬ್ರಿಟೀಷರ  ದಾಸ್ಯದಿಂದ ಭಾರತ 1947ರಂದು ಸ್ವತಂತ್ರಗೊಂಡಿತು. ಮಹಾತ್ಮ ಗಾಂಧಿ, ಲಾಲ್‌ ಬಹದ್ದೂರ್ ಶಾಸ್ತ್ರಿ, ಬಾಲಗಂಗಾಧರ ತಿಲಕ ಹೀಗೆ ಹಲವಾರು ಮಹಾ ಚೇತನರ ನೇತೃತ್ವ, ಅದೆಷ್ಟೋ ಸ್ವಾತಂತ್ರ್ಯ ಸೇನಾನಿಗಳ ಬಲಿದಾನದಿಂದಾಗಿ ಬ್ರಿಟೀಷರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ವಿದ್ಯಾರ್ಥಿಗಳು ಸ್ವಾತಂತ್ರ್ಯದ ಸಂಗ್ರಾಮದ ಬಗ್ಗೆ ತಿಳಿದುಕೊಂಡು ದೇಶಪ್ರೇಮ ಮೆರೆಯಬೇಕೆಂದರು.

ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ತಾ.ಪಂ. ಇಒ ಗುರುದತ್‌ ಎಂ.ಎನ್‌., ಪುರಸಭಾ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ, ಬಿಇಒ ವೆಂಕಟೇಶ್‌ ಜಿ. ನಾಯಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೆರ್ವಾಜೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ಕಾರ್ಕಳ ಅನಂತಶಯನದಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ಸಾಗಿತು. ಪುರಸಭಾ ಅಧ್ಯಕ್ಷೆ ಸುಮಾಕೇಶವ್‌ ಅನಂತಶಯನ ವೃತ್ತದಲ್ಲಿ ಧ್ವಜಾರೋಹಣ ಮಾಡಿದರು. ವಿವಿಧ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ವರ್ಗ, ಭುವನೇಂದ್ರ ಕಾಲೇಜಿನ ಎನ್‌ಸಿಸಿ ಘಟಕ, ಪುರಸಭಾ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಸ್ಕೌಟ್‌ ಮತ್ತು ಗೈಡ್ಸ್‌, ಸೇವಾದಳ, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಪೆರ್ವಾಜೆ ಶಾಲಾ ಮಕ್ಕಳ ಕೋಲಾಟ ಮೆರವಣಿಗೆಗೆ ಮೆರುಗು ನೀಡಿತು. ಡಿವೈಎಸ್‌ಪಿ ವಿಜಯ ಪ್ರಸಾದ್‌ ನೇತೃತ್ವದ ಪೊಲೀಸ್‌ ತಂಡ, ಗೃಹರಕ್ಷಕ ದಳ ಗಾಂಧಿ ಮೈದಾನದಲ್ಲಿ ಪರೇಡ್‌ ನಡೆಸಿತು.

ಧ್ವಜಾರೋಹಣ ಬಳಿಕ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜರಗಿತು. ಈ ವೇಳೆ ಸಾಧಕರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು. ನೋಡೆಲ್‌ ವಿಶ್ವದಾಖಲೆ ಮಾಡಿ ಇಂಡಿಯನ್‌ ಬುಕ್‌ ಆಫ್‌ ರೇಕಾರ್ಡ್‌ ಯೋಗ ವಿಭಾಗದಲ್ಲಿ ಸಾಧನೆ ಮಾಡಿರುವ ಕಾಬೆಟ್ಟು ಸ.ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನರೇಂದ್ರ ಕಾಮತ್‌, ಯೋಗ ಪ್ರತಿಭೆ ರವಿಶಂಕರ್‌ ವಿದ್ಯಾಮಂದಿರದ ಹೆಚ್.‌ ಅಂಚನ್‌, ಕ್ರೀಡಾಪ್ರತಿಭೆಗಳಾದ ಪೆರ್ವಾಜೆ ಪ್ರೌಢ ಶಾಲೆಯ ವಿದ್ಯಾರ್ಥಿ ಜೀವಿತ್‌ ಹಾಗೂ ಅನನ್ಯಾ, ಕೆ. ಸೂರಜ್‌ ಅವರನ್ನು ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ತಾ.ಪಂ. ಇಒ ಗುರುದತ್‌, ಪುರಸಭಾ ಮುಖ್ಯಾಧಿಕಾರಿ ರೂಪ ಶೆಟ್ಟಿ ಸನ್ಮಾನಿಸಿದರು.

ಶಿಕ್ಷಕರಾದ ದೇವದಾಸ್‌ ಕೆರೆಮನೆ ಹಾಗೂ ಗಣೇಶ್‌ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಪೆರ್ವಾಜೆ ಸರಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ, ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್‌, ಕಾಬೆಟ್ಟು ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಭುವನೇಂದ್ರ ವಿದ್ಯಾಸಂಸ್ಥೆ ಕಾರ್ಕಳ, ಜೇಸಿಸ್‌ ಆಂಗ್ಲ ಮಾ‍ಧ್ಯಮ ಶಾಲಾ ವಿದ್ಯಾರ್ಥಿಗಳು, ಕಾರ್ಕಳ ಟೀಂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News