ಭಟ್ಕಳ ತಂಝೀಮ್ ನೇತೃತ್ವದಲ್ಲಿ ತಿರಂಗ ಬೈಕ್ ರ‍್ಯಾಲಿ; 2000ಕ್ಕೂ ಅಧಿಕ ಬೈಕ್‌ಗಳು ಭಾಗಿ

Update: 2022-08-15 14:16 GMT

ಭಟ್ಕಳ: ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಸಂಸ್ಥೆಯು ಆಝಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆ.15ರಂದು ಸಂಜೆ ಆಯೋಜಿಸಿದ್ದ ತಿರಂಗ ಬೈಕ್ ಮಹಾ ರ‍್ಯಾಲಿಯಲ್ಲಿ 2000 ಕ್ಕೂ ಅಧಿಕ ದ್ವೀಚಕ್ರ ವಾಹನಗಳು ಭಾಗಿಯಾಗಿದ್ದು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಸಾಗರ ರಸ್ತೆಯ ಆನಂದಾಶ್ರಮ ಕಾನ್ವೆಂಟ್ ಶಾಲಾ ಮೈದಾನದಿಂದ ಆರಂಭಗೊಂಡ ಬೈಕ್ ರ‍್ಯಾಲಿ ನವಾಯತ್ ಕಾಲನಿಯ ತಾಲೂಕು ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಬೈಕ್ ರ‍್ಯಾಲಿಯನ್ನುದ್ದೇಶಿ ಮಾತನಾಡಿದ ತಂಝೀಮ್ ಪ್ರಧಾನ ಕಾರ್ಯದರ್ಶಿ ದೇಶಕ್ಕಾಗಿ ನಾವು ನಮ್ಮ ಪ್ರಾಣ ಮತ್ತು ಸಂಪತ್ತನ್ನು ತ್ಯಾಗ ಮಾಡಲು ಸಿದ್ದರಿದ್ದೇವೆ. ಈ ದೇಶ ನಮಗೆ ನಮ್ಮ ಪ್ರಾಣಕ್ಕಿಂತಲೂ ಪ್ರೀಯವಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಮಾತನಾಡಿ, ಭಾರತದಲ್ಲಿನ ಶಾಂತಿಯುತ  ವಾತಾವರಣ ಕದಡುವ ಎಷ್ಟೇ ಪ್ರಯತ್ನಗಳು ನಡೆಯಲಿ ಇಲ್ಲಿನ ಜನರು ಮಾತ್ರ ಅದಕ್ಕೆ ಕಿವಿಗೊಡುವುದಿಲ್ಲ. ಕೋಮುದ್ರೂವೀಕರಣದ ನಡುವೆಯೂ ನಮ್ಮಲ್ಲಿ ಸಹೋದರತೆ, ಪ್ರೀತಿ ಪ್ರೇಮ ಇನ್ನೂ ಜೀವಂತವಾಗಿದೆ. ಇಲ್ಲಿನ ಬಹುಸಂಖ್ಯಾತರು ಎಲ್ಲರೊಂದಿಗೆ ಬದುಕುವ ಪಣತೊಟ್ಟಿದ್ದಾರೆ. ದೇಶ ವಿಶ್ವಗುರು ಎನಿಸಿಕೊಳ್ಳಬೇಕಾದರೆ ಇಲ್ಲಿನ ಹಿಂದೂ-ಮುಸ್ಲಿಮರು ಕೂಡ ಶ್ರಮಿಸಬೇಕಾಗಿದೆ. ನಾವು ಎಲ್ಲರನ್ನೂ ಪ್ರೀತಿಸುವವರಾಗಿದ್ದೇವೆ. ಪ್ರೀತಿ, ಶಾಂತಿಯನ್ನು ಬಯಸುತ್ತೇವೆ ಎಂದರು.

ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತಿಕರ‍್ರಹ್ಮಾನ್ ಮುನಿರಿ, ತಂಝೀಮ್ ಮುಖಂಡ ಇನಾಯತುಲ್ಲಾ ಶಾಬಂದ್ರಿ, ಪೊಲೀಸ್ ವೃತ್ತ ನಿರೀಕ್ಷಕರ ದಿವಾಕರ್ ಮಾತನಾಡಿದರು.

ತಂಝೀಮ್ ಉಪಾಧ್ಯಕ್ಷ ಮುಹಮ್ಮದ ಜಾಫರ್ ಮೊಹತೆಶಮ್, ಅಬ್ದುಲ್ ರಹ್ಮಾನ್ ಜಾನ್, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝರ‍್ರಹ್ಮಾನ್ ನದ್ವಿ, ಮೌಲಾನ ಯಾಸೀರ್ ನದ್ವಿ, ಮತ್ತಿತರ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಅತ್ಯಂತ ಉತ್ಸಾಹ, ಸಡಗರದಿಂದ ತಿರಂಗ ಬೈಕ್ ಮಹಾ ರ‍್ಯಾಲಿಯಲ್ಲಿ ಯುವಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News